ಬಸವಕಲ್ಯಾಣ: ಸಿಎಎ ಪರ ನಡೆದ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಯುವ ಕಾಂಗ್ರೆಸ್ ಮುಖಂಡರಿಂದ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ಯುವ ಕಾಂಗ್ರೆಸ್ ರಾಜ್ಯ ಸಮಿತಿ ಕಾರ್ಯದರ್ಶಿ ಸಂದೀಪ್ ಬುಯ್ಯೆ ನೇತೃತ್ವದಲ್ಲಿ ನಗರ ಠಾಣೆಗೆ ತೆರಳಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಪ್ರಚೋದನಾತ್ಮಕ ಹೇಳಿಕೆ ನೀಡಿದ ಶಾಸಕ ಸೋಮಶೇಖರ ರೆಡ್ಡಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪಿಎಸ್ಐ ಸುನಿಲ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಜ.3 ರಂದು ಬಳ್ಳಾರಿಯಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಸೋಮಶೇಖರರೆಡ್ಡಿ ಅವರು, ಜಾಸ್ತಿ ನಕರ್ ಮಾಡಿದ್ರೆ ಸರಿ ಇರಲ್ಲ. ನೀವಿರೊದು 17 ಪರ್ಸೆಂಟ್, ನಾವಿರೋದು 80 ಪರ್ಸೆಂಟ್, ನಾವು ಉಫ್ ಅಂತ ಊದಿದ್ರೆ ಗಾಳಿಗೆ ಹಾರಿ ಹೋಗ್ತೀರಾ ಎಂದು ಹೇಳುವ ಮೂಲಕ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ.
ಜಾತಿ-ಜಾತಿಗಳ ಮಧ್ಯೆ, ಧರ್ಮಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ಇಂಥಹ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಶಾಸಕರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಯುವ ಕಾಂಗ್ರೆಸ್ ಪ್ರಮುಖರಾದ ಖಜರ ನಿಜಾಮಿ, ಅಮೀರ ಖುಸ್ರೊ, ಸೌದ್ ಭೋಸ್ಗೆ, ಜಲಾನಿ ಕಬಾಡೆ, ಶಫಿ ಅಹ್ಮದ್, ಸಂತೋಷ್ ಗುತ್ತೇದಾರ್ ದೂರು ದಾಖಲಿಸಿದ್ದಾರೆ.