ಬಸವಕಲ್ಯಾಣ: ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ಚುನಾವಣೆ ನಡೆಯಲಿದ್ದು, ವಾರ್ಡ್ ಸಂಖ್ಯೆ-19ರ ಕಾಂಗ್ರೆಸ್ ಸದಸ್ಯೆ ನಾಹೇದಾ ಸುಲ್ತಾನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮಹಿಳೆಗೆ ಮೀಸಲು ನಿಗದಿಯಾಗಿದೆ. ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ನ 19, ಬಿಜೆಪಿ 5, ಜೆಡಿಎಸ್ 3, ಎಂಐಎ 3 ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 1 ಸದಸ್ಯರನ್ನು ಹೊಂದಿದೆ. 19 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲು ಅಗತ್ಯವಿರುವ ಬಹುಮತ ಹೊಂದಿದೆ. ಅಧ್ಯಕ್ಷರಾಗಿ ನಾಹೇದಾ ಸುಲ್ತಾನ ಹಾದಿ ಸುಗಮವಾಗಿದೆ. ಆದರೆ 19 ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಎಸ್‌ಸಿ ಮಹಿಳೆ ಇಲ್ಲದ ಕಾರಣ ಉಪಾಧ್ಯಕ್ಷ ಸ್ಥಾನ ಅನ್ಯ ಪಕ್ಷದ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ.
3 ಸ್ಥಾನಗಳನ್ನು ಹೊಂದಿರುವ ಎಂಐಎ ಅಭ್ಯರ್ಥಿ ಮೀನಾ ರಾಮ್ ಘೋಡಬೋಲೆ ಹಾಗೂ 5 ಸ್ಥಾನ ಹೊಂದಿರುವ ಬಿಜೆಪಿಯ ಲಲಿತಾಬಾಯಿ ಡಾಂಗೆ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಬಹುಮತಕ್ಕೆ ಬೇಕಾದ ಅಗತ್ಯ ಸದಸ್ಯರ ಬಲ ಈ ಎರಡೂ ಪಕ್ಷಗಳಲ್ಲಿ ಇಲ್ಲದ ಕಾರಣ ಆಯ್ಕೆ ಕಗ್ಗಂಟಾಗಿ ಉಳಿಯುವಂತೆ ಮಾಡಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಉಪಾಧ್ಯಕ್ಷರಾಗಿ ಮಾಡಬೇಕು ಎಂದು ಎಂಐಎ ಪಕ್ಷ ಪ್ರಯತ್ನಿಸುತ್ತಿದೆ.