ಬೀದರ್ : ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಲಾಯಿತು. ನಾಡ ದೊರೆ, ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಉದ್ಘಾಟನೆ ಕೂಡ ಮಾಡಿಸಲಾಯಿತು. ಆದರೆ, ಅಧಿಕಾರಿಗಳು ಮಾಡಿದ ಯಡವಟ್ಟಿಗೆ ಕೋಟಿ ಕೋಟಿ ಸುರಿದು ಕಟ್ಟಿದ ಆಸ್ಪತ್ರೆ ನೆಲಸಮ ಮಾಡುವಂತೆ ನೋಟಿಸ್ ಬಂದಿದೆ.
ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ಈಗ ಸಂಕಷ್ಟ ಎದುರಾಗಿದೆ. ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಟ್ಟಿದ ನೂತನ ಕಟ್ಟಡವನ್ನು ನೆಲಸಮ ಮಾಡುವಂತೆ ಪುರಾತತ್ವ ಇಲಾಖೆ ನೋಟಿಸ್ ನೀಡಿದೆ. ಇದರಿಂದ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.
ತಿಂಗಳ ಹಿಂದೆ ಅಂದ್ರೆ ಜನವರಿ 6ರಂದು ಉದ್ಘಾಟನೆಗೊಂಡ ಆಸ್ಪತ್ರೆಯನ್ನು ನೆಲಸಮ ಮಾಡುವಂತೆ ಪುರಾತತ್ವ ಇಲಾಖೆ ನೋಟಿಸ್ ನೀಡಲು ಒಂದು ಕಾರಣವಿದೆ. ಅದೇನೆಂದರೆ, ನೂತನ ಆಸ್ಪತ್ರೆ ಕಟ್ಟಡದ ಸಮೀಪವೇ ಐತಿಹಾಸಿಕ ಮೊಹಮ್ಮದ್ ಗವಾನ್ ವಿಶ್ವವಿದ್ಯಾನಿಯಲವಿದೆ. ಈ ವಿಶ್ವ ವಿದ್ಯಾಲಯದ ಸುತ್ತಮುತ್ತ ಯಾವುದೇ ನೂತನ ಕಟ್ಟಡ ಕಟ್ಟಬಾರದೆಂದು ಪುರಾತತ್ವ ಇಲಾಖೆಯ ಕಟ್ಟು ನಿಟ್ಟಿನ ನಿರ್ದೇಶನವಿದೆ.
ಆದರೂ ಕೂಡ ಇಲ್ಲಿ ಅಧಿಕಾರಿಗಳು ಆಸ್ಪತ್ರೆ ಕಟ್ಟಿದ್ದಾರೆ. ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದಾಗಲೂ ಪುರಾತ್ವ ಇಲಾಖೆ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇಲ್ಲಿ ಯಾವುದೇ ಕಾರಣಕ್ಕೂ ಆಸ್ಪತ್ರೆ ನಿರ್ಮಾಣ ಮಾಡದಂತೆ ನೋಟಿಸ್ ನೀಡಿತ್ತು. ಅದನ್ನು ಲೆಕ್ಕಿಸದೆ ಆರೋಗ್ಯ ಇಲಾಖೆ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿದೆ.
ಇಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಮುನ್ನ ನಗರಸಭೆಯಿಂದ ಅನುಮತಿ ಪಡೆದುಕೊಂಡಿಲ್ಲ. ಜೊತೆಗೆ ಪುರಾತತ್ವ ಇಲಾಖೆಯಿಂದಲೂ ಎನ್ಒಸಿ ಕೂಡ ಪಡೆದಿಲ್ಲ. ಹೀಗಾಗಿ, ಕೋಟ್ಯಂತರ ರೂ. ವ್ಯಯಿಸಿ ಕಟ್ಟಿದ ಆಸ್ಪತ್ರೆ ನೆಲಸಮ ಮಾಡುವಂತೆ ಪುರಾತತ್ವ ಇಲಾಖೆ ಮೇಲಿಂದ ಮೇಲೆ ನಗರ ಸಭೆಗೆ, ಜಿಲ್ಲಾಡಳಿತಕ್ಕೆ ನೋಟಿಸ್ ಕೊಡುತ್ತಿದೆ.
ಒಂದು ವೇಳೆ ಪುರಾತತ್ವ ಇಲಾಖೆ ಕಟ್ಟಡವನ್ನು ನೆಲ ಸಮ ಮಾಡಿದರೆ, ಅದಕ್ಕೆ ವ್ಯಯಿಸಿದ ಹಣ ಭರಿಸುವವರು ಯಾರು ಎಂದು ಜನ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನ ಕೇಳುತ್ತಿದ್ದಾರೆ. ಆದರೆ, ಇದಕ್ಕೆ ಯಾರ ಬಳಿಯೂ ಉತ್ತರ ಇಲ್ಲ.