ಬೀದರ್: ಕೊರೊನಾ ಸಂಕಷ್ಟದ ನಡುವೆಯೇ ಗಡಿ ಜಿಲ್ಲೆ ಬೀದರ್ನಲ್ಲಿ ರಾಜಾರೋಷವಾಗಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ತೆಲಂಗಾಣದಿಂದ ಅಕ್ರಮವಾಗಿ ಜಿಲ್ಲೆಯ ಔರಾದ್ ಹಾಗೂ ಕಮಲನಗರ ತಾಲೂಕಿನ ಮೂಲಕ ಮಹಾರಾಷ್ಟ್ರಕ್ಕೆ ನಿತ್ಯವೂ ನೂರಾರು ವಾಹನಗಳಲ್ಲಿ ಮರಳು ಸಾಗಣೆ ಮಾಡಲಾಗ್ತಿದೆ ಎನ್ನಲಾಗಿದೆ.
ತೆಲಂಗಾಣದ ಕಂಟಗಟಿ ಮಾರ್ಗವಾಗಿ ಸುಮಾರು 70 ಟನ್ ಮರಳು ತುಂಬಿಕೊಂಡು ಬರುವ ಟ್ರಕ್ಗಳು, ಔರಾದ್ ಪಟ್ಟಣದ ಎಪಿಎಂಸಿ ಭಾಗದಲ್ಲಿ ಮತ್ತು ಡೊಂಗರಗಾಂವ್ ಗ್ರಾಮದ ಹೊರ ವಲಯದ ಖಾಸಗಿ ಜಾಗದಲ್ಲಿ ಜಮಾಯಿಸುತ್ತವೆ. ನಂತರ ಬೇರೆ ಲಾರಿಗಳಲ್ಲಿ ಸಾಮೂಹಿಕವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದೆ. ಇದರಿಂದಾಗಿ ಸುಸಜ್ಜಿತವಾಗಿ ನಿರ್ಮಾಣವಾದ ರಸ್ತೆಗಳು ಸಹ ಹಾಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತೆಲಂಗಾಣ ಸರ್ಕಾರ ಸುಂಕದಿಂದ ತಪ್ಪಿಸಿಕೊಂಡು ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದೆ. ಒಂದೊಂದು ಟ್ರಕ್ನಲ್ಲಿ ಮಿತಿ ಮಿರಿ ಮರಳು ತುಂಬಿಕೊಂಡು ಸುಸಜ್ಜಿತವಾಗಿ ನಿರ್ಮಿಸಿದ ರಸ್ತೆಗಳ ಮೇಲೆ ರಾಜಾರೋಷವಾಗಿ ಸಾಗಣೆ ಮಾಡುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ ಕೇಳಿ ಬರುತ್ತಿದೆ.
ಹೊಸ ರಸ್ತೆಗಳು ಧೂಳಿಪಟ:
ಪ್ರಸಕ್ತ ಸಾಲಿನಲ್ಲಿ ಚಿಂತಾಕಿ - ಔರಾದ್, ಔರಾದ್- ಎಕಂಬಾ, ಎಕಂಬಾ- ಹುಲ್ಯಾಳ, ಹುಲ್ಯಾಳ- ಚಿಮ್ಮೆಗಾಂವ್ ಹಾಗೂ ಚಿಮ್ಮೆಗಾಂವ್- ಮುರ್ಕಿ ಬಾರ್ಡರ್ ವರೆಗಿನ ಸುಮಾರು 50 ಕಿ. ಮೀಟರ್ ರಸ್ತೆ ನಿರ್ಮಾಣ ಮಾಡಿದ್ದು, ಅಂದಾಜು 40 ಕೋಟಿ ರೂ. ವೆಚ್ಚ ಮಾಡಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ಕಳೆದ ಎರಡು ತಿಂಗಳಿನಿಂದ ಈ ರಸ್ತೆಗಳ ಮೇಲೆ ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿರುವ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆಗಳು ತನ್ನ ಅಸ್ಥಿತ್ವ ಕಳೆದುಕೊಳ್ಳಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಮರಳು ನೀತಿಯನ್ನು ಸಾಕಷ್ಟು ಸುಲಭ ಮಾಡಿಕೊಟ್ಟರೂ ಹಣದ ಆಸೆಗೆ ಬಿದ್ದ ಕೆಲವರು, ಸರ್ಕಾರ ರೂಪಿಸಿದ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮದಲ್ಲಿ ತೊಡಗಿದ್ದಾರೆ. ಮರಳು ಸುಂಕ, ಹೆದ್ದಾರಿ ಸುಂಕ, ಪಾವತಿಸದೇ (ಓವರ್ ಲೋಡ್) ಮನಸ್ಸಿಗೆ ಬಂದ ಹಾಗೆ ಸಾಗಿಸಲಾಗ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಲೋಕೊಪಯೋಗಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಸಾರಿಗೆ ಇಲಾಖೆ ಹಾಗೂ ಗೃಹ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಅವ್ಯಾಹತವಾಗಿ ಮುಂದುವರೆದಿದೆ ಎಂಬುದು ಸ್ಥಳೀಯರ ಮಾತು.
ಅಕ್ರಮ ಮರಳು ಸಾಗಣೆಗೆ ತೀವ್ರ ವಿರೋಧ:
ರಾಜ್ಯ ಸರ್ಕಾರದ ಖಜಾನೆಗೆ ಸುಂಕ ಪಾವತಿಸಿ ತೆಲಂಗಾಣದಿಂದ ಬರುವ ಮರಳು ಮಾರಾಟ ಮಾಡಲು ಸಾರ್ವಜನಿಕರ ವಿರೋಧವಿಲ್ಲ. ಆದರೆ ಮೀತಿ ಮಿರಿ ತುಂಬಿದ ಲಾರಿಗಳ ಓಡಾಟ ಅಲ್ಲದೆ, ಸರ್ಕಾರಕ್ಕೆ ಸುಂಕ ಪಾವತಿಸದೇ ದುಬಾರಿ ಬೆಲೆಗೆ ಮರಳು ಮಾರಾಟ ಮಾಡುವ ದಂಧೆಯಿಂದ ರಾಜ್ಯದ ರಸ್ತೆಗಳು ಹಾಳಾಗ್ತಿರುವುದಲ್ಲದೇ, ಸ್ಥಳೀಯರಿಗೆ ಇದರ ಉಪಯೋಗ ಕೂಡ ಸಿಗುತ್ತಿಲ್ಲ. ಹೀಗಾಗಿ ಇಂತಹ ದಂಧೆಕೋರರಿಗೆ ಮೂಗುದಾರ ಹಾಕಿ ರಾಜ್ಯಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಖಡಕ್ ಎಚ್ಚರಿಕೆ ನೀಡಿದ ಸಚಿವ ಪ್ರಭು ಚವ್ಹಾಣ್ :
ಅಕ್ರಮ ಮರಳು ಸಾಗಣೆ ಮಾಡ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಈ ದಂಧೆಯಲ್ಲಿ ತೊಡಗಿದ್ದವರನ್ನು ಫೋನ್ ಮಾಡಿ ಕರೆಯಿಸಿ, ಸರ್ಕಾರದ ನಿಯಮಾನುಸಾರ ಮರಳು ಸಾಗಣೆ ಮಾಡುವಂತೆ ಸೂಚನೆ ನೀಡಿದ್ದೇನೆ. ಅಲ್ಲದೇ, ಮೀತಿ ಮೀರಿ ಮರಳು ಸಾಗಿಸುವ ವಾಹನಗಳ ಮೇಲೆ ಸಾರಿಗೆ ನಿಯಂತ್ರಣಾಧಿಕಾರಿ (ಆರ್ಟಿಒ) ಅವರು ನಿಗಾ ವಹಿಸುವಂತೆ ಖಡಕ್ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.