ಬಸವಕಲ್ಯಾಣ (ಬೀದರ್): ತನ್ನ ಹೆತ್ತ ಇಬ್ಬರು ಬಾಲಕಿಯರ ಮೇಲೆಯೇ ಕಾಮುಕ ತಂದೆಯೊಬ್ಬ ಅತ್ಯಾಚಾರ ಮಾಡಿದ ಘಟನೆ ಹುಲಸೂರ ತಾಲೂಕಿನ ಬೇಲೂರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 2 ತಿಂಗಳ ಹಿಂದೆ ಕೊರೊನಾ ನಿಯಂತ್ರಣ ಸಂಬಂಧ ಜಾರಿಗೊಳಿಸಿದ ಲಾಕ್‌ಡೌನ್ ಅವಧಿಯಲ್ಲಿ ತನ್ನ 10 ಹಾಗೂ 11 ವರ್ಷದ ಮಕ್ಕಳ ಮೇಲೆ ಕಾಮುಕ ತಂದೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಮೂಲತಃ ಮಹಾರಾಷ್ಟ್ರದ ದೇವಣಿ ತಾಲೂಕಿನವರಾದ ದಂಪತಿಗಳು ಕಳೆದ 4 ವರ್ಷದ ಹಿಂದೆ ಬೇಲೂರ ಗ್ರಾಮದಲ್ಲಿ ಬಂದು ನೆಲೆಸಿದ್ದರು. ಲಾಕ್‌ಡೌನ್ ವೇಳೆ ಮಕ್ಕಳ ಮೇಲೆ ಅತ್ಯಾಚಾರ ನಡೆಸುವುದನ್ನು ಗಮನಿಸಿ, ಇದನ್ನು ಪ್ರಶ್ನಿಸಿದ ಪತ್ನಿಯ ಜೊತೆ ಪತಿ ಜಗಳವಾಡಿದ ಕಾರಣ ಪತ್ನಿ ಮನೆಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಕಾಮುಕ ಪತಿ ನಂತರ ಪತ್ನಿಗೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಇದರಿಂದ ಬೇಸತ್ತ ಪತ್ನಿ ಹುಲಸೂರ ಠಾಣೆಗೆ ಬಂದು ಪತಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.