ಬಸವಕಲ್ಯಾಣ (ಬೀದರ್): ಜಮೀನು ಮಾರಿದ ಹಣ ನೀಡಲಿಲ್ಲವೆಂದು ಮನನೊಂದ ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುತ್ತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಾಜಿ ಹಣಮಂತರಾವ ಬಿರಾದಾರ (48) ಜಮೀನಿನ ಮರಕ್ಕೆ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಗಳ ಮದುವೆ ಸಂಬಂಧ ಹಣದ ಅಡಚಣೆ ಇದ್ದ ಕಾರಣ ಪಕ್ಕದ ಖಂಡಾಳ ಗ್ರಾಮದ ಕಾಶಪ್ಪ ಮೇತ್ರೆ ಎನ್ನುವಾತನಿಗೆ 1 ಎಕರೆ ಜಮೀನನ್ನು 12 ಲಕ್ಷ ರೂ. ಬೆಲೆಗೆ ಮಾರಾಟ ಮಾಡಲಾಗಿತ್ತು.
ಮುಂಗಡವಾಗಿ 4 ಲಕ್ಷ ರೂ. ಪಡೆಯಲಾಗಿತ್ತು. ಆದರೆ, ಉಳಿದ ಹಣ ನೀಡುವಂತೆ ಪದೇ, ಪದೇ ಕೇಳಿದರೂ ಹಣ ನೀಡಿರಲಿಲ್ಲ. ಮಾರಾಟ ಮಾಡಿದ 1 ಎಕರೆ ಜಮೀನಿನ ಬದಲಾಗಿ ಮತ್ತೊಂದು ಎಕರೆ ಜಮೀನು ಕೂಡ ಕಬ್ಜಾ ಮಾಡಲಾಗಿದೆ ಎಂದು ಮೃತನ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಲಸೂರ ಠಾಣೆ ಪೊಲೀಸರ ತಂಡ, ಆರೋಪಿ ಬಂಧನಕ್ಕೆ ಜಾಲ ಬಿಸಿದೆ.