ಬೀದರ್: ಕನಸಿನ ಮನೆ ಕಟ್ಟಲು ಕೂಡಿಟ್ಟ 5.50 ಲಕ್ಷ ರೂಪಾಯಿ ಹಣ ನೋಡ- ನೋಡುತ್ತಲೇ ಖದೀಮರ ಪಾಲಾಗಿದ್ದು, ಕಂಗೆಟ್ಟ ಶಿಕ್ಷಕ ದಿಕ್ಕು ಕಾಣದೆ ಕಂಗಾಲಾಗಿದ್ದಾರೆ.
ನಗರದ ಕೆನರಾ ಬ್ಯಾಂಕ್ ಎದುರಲ್ಲಿ ಕಳ್ಳತನ ನಡೆದಿದ್ದು, ತಾಲೂಕಿನ ಕಮಠಾಣ ಗ್ರಾಮದ ಯುಸೂಫ್ ಮಿಯ್ಯಾ ಎಂಬ ಶಿಕ್ಷಕ ಡಿಸಿಸಿ ಬ್ಯಾಂಕ್ನಲ್ಲಿ ಕೂಡಿಟ್ಟ ಹಣವನ್ನು ಇಂದು ಡ್ರಾ ಮಾಡಿದ್ದಾರೆ. ಪತ್ನಿಯೊಂದಿಗೆ ಬಂದ ಇವರು, ಹಣವನ್ನು ತಮ್ಮ ಸ್ಕೂಟಿಯ ಡಿಕ್ಕಿಯಲ್ಲಿ ಲಾಕ್ ಮಾಡಿಟ್ಟು, ನಗರದ ಕೆನರಾ ಬ್ಯಾಂಕ್ನಲ್ಲಿ ಮಕ್ಕಳ ವಿದ್ಯಾರ್ಥಿ ವೇತನ ಜಮಾ ಆಗಿದೆಯಾ ಎಂದು ನೋಡಲು ಹೋಗಿದ್ದಾರೆ. ಈ ವೇಳೆ ಕಳ್ಳರು ಕೈ ಚಳಕ ತೋರಿಸಿ, ಸ್ಕೂಟಿ ಡಿಕ್ಕಿಯಲ್ಲಿದ್ದ ಬರೋಬ್ಬರಿ 5.50 ಲಕ್ಷ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ನ್ಯೂಟೌನ್ ಪಿಎಸ್ಐ ಗುರು ಪಾಟೀಲ್ ಭೇಟಿ ನೀಡಿದ್ದು, ಹಾಡಹಗಲೇ ನಡೆದ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇತ್ತ ಹಣ ಕಳೆದುಕೊಂಡ ಯುಸೂಫ್ ಮಿಯ್ಯಾ ಕಂಗಾಲಾಗಿ ಹೋಗಿದ್ದಾರೆ.