ಬೀದರ್: ರಾಜ್ಯ ಸರ್ಕಾರ ಈ ಸಾಲಿನ (2019-20ನೇ) ಶೈಕ್ಷಣಿಕ ವರ್ಷದಿಂದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದೆ. ಗಡಿ ಜಿಲ್ಲೆ ಬೀದರ್ನ ಗ್ರಾಮಾಂತರ ಪ್ರದೇಶದಲ್ಲಿಯೇ 26 (ಎಲ್ಕೆಜಿ ಮತ್ತು ಯುಕೆಜಿ) ಶಾಲೆಗಳನ್ನು ತೆರೆಯಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ಒಂದಿಷ್ಟು ತಯಾರಿ ಸಹ ಮಾಡಿಕೊಳ್ಳುತ್ತಿದೆ.
ರಾಜ್ಯ ಸರ್ಕಾರ ಒಂದು ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಘೋಷಣೆ ಮಾಡಿದ್ದು, ಗಡಿ ಜಿಲ್ಲೆ ಬೀದರ್ನಲ್ಲಿ 26 ಶಾಲೆಗಳನ್ನು ತೆರೆಯಲಾಗಿದೆ. ಈ ವರ್ಷ ಬೀದರ್ ತಾಲೂಕಿನಲ್ಲಿ ಏಳು, ಭಾಲ್ಕಿ ತಾಲೂಕಿನಲ್ಲಿ ಮೂರು, ಔರಾದ್ ತಾಲೂಕಿನಲ್ಲಿ ನಾಲ್ಕು, ಬಸವಕಲ್ಯಾಣ ತಾಲೂಕಿನಲ್ಲಿ ಐದು, ಹುಮನಾಬಾದ್ ತಾಲೂಕಿನಲ್ಲಿ ಏಳು ಸೇರಿದಂತೆ ಒಟ್ಟು 26 ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ರಾಜ್ಯ ಪಠ್ಯ ಕ್ರಮದಂತೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಇರಲಿದ್ದು, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿ ಮಗುವಿಗೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆಯೋ ಅದೇ ಮಾದರಿಯ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿದೆ ಎನ್ನುತ್ತರಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ.
ಇನ್ನು ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದ್ದು, ಭರದ ಸಿದ್ಧತೆ ಸಹ ನಡೆದಿದೆ. ಪ್ರತ್ಯೇಕ ಶಾಲಾ ಕೊಠಡಿಯನ್ನು ಸಹ ತಯಾರಿಸಲಾಗುತ್ತಿದೆ. ಇಲ್ಲಿನ ಶಿಕ್ಷಕರ ವರ್ಗ ಸುಣ್ಣ-ಬಣ್ಣ ಮಾಡಿಸಿ ಪುಟ್ಟ ಮಕ್ಕಳ ಮನ ಸೆಳೆಯಲು ತುದಿಗಾಲ ಮೇಲೆ ನಿಂತಿದ್ದಾರೆ.