ಬಸವಕಲ್ಯಾಣ : ನಿಯಮ ಮೀರಿ ವ್ಯಾಪಾರ ನಡೆಸುತಿದ್ದ ಸುಮಾರು 17 ಅಂಗಡಿಗಳನ್ನು ನಗರಸಭೆಯಿಂದ ಸೀಜ್ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ನಗರಸಭೆ ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್, ನೈರ್ಮಲ್ಯ ನಿರೀಕ್ಷಕ ಅಶ್ವಿನ್ ಕಾಂಬ್ಳೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರದ ಹಲಸೂರು ರಸ್ತೆ ತರಕಾರಿ ಮಾರ್ಕೆಟ್ ಸೇರಿ ವಿವಿಧೆಡೆ ಅನುಮತಿ ಇಲ್ಲದ ಅಂಗಡಿಗಳನ್ನು ಸೀಜ್ ಮಾಡಿ, ಅಂಗಡಿಗಳಿಗೆ ಬೀಗ ಜಡಿದಿದ್ದಾರೆ.
ಕೊರೊನಾ ಹರಡುವಿಕೆ ತಡೆಗಟ್ಟುವ ಸಂಬಂಧ ಲಾಕ್‌ಡೌನ್ ವ್ಯವಸ್ಥೆ ಜಾರಿಯಲ್ಲಿದೆ. ಅಗತ್ಯ ವಸ್ತು ಮಾರಾಟದ ಅಂಗಡಿಗಳನ್ನು ಬಿಟ್ಟು ಉಳಿದ ಯಾವುದೇ ಅಂಗಡಿಗಳಿಗೂ ಅನುಮತಿ ನೀಡಲಾಗಿಲ್ಲ. ಆದರೆ, ಬಟ್ಟೆ ಅಂಗಡಿ ಎಲೆಕ್ಟ್ರಾನಿಕ್ ಶಾಪ್ ಸೇರಿ ವಿವಿಧ ಅಂಗಡಿಗಳನ್ನು ಓಪನ್ ಮಾಡಿ ವ್ಯಾಪಾರ ನಡೆಸಲಾಗುತ್ತಿದೆ. ಇಂತಹ ಅಂಗಡಿಗಳನ್ನು ಸೀಜ್ ಮಾಡಲಾಗಿದೆ.
ಇದೇ ವೇಳೆ ಕೆಲ ಕಿರಾಣಿ ಅಂಗಡಿಗಳಿಗೆ ದಿಢೀರನೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು, ಅಂಗಡಿಗಳಲ್ಲಿ ಮಾರಾಟ ಮಾಡಲು ಸಂಗ್ರಹಿಸಿಡಲಾಗಿದ್ದ ಗುಟ್ಕಾ ಸೇರಿ ಸುಮಾರು 50 ಸಾವಿರ ರೂ. ಮೌಲ್ಯದ ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಿದರು.