ಬೀದರ್: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ನಡೆದ ಪರಿಣಾಮ ಶಿಕ್ಷಕರನ್ನು ಅಮಾನತುಗೊಳಿಸಿರುವ ಘಟನೆ ಬೀದರ್ನಲ್ಲಿ ನಡೆದಿದೆ. ಭಾಲ್ಕಿ ಪಟ್ಟಣದ ಶಿವಾಜಿ ಪ್ರೌಢ ಶಾಲೆಯಲ್ಲಿನ ಪರೀಕ್ಷೆ ಕೇಂದ್ರದಲ್ಲಿ ಗುರುವಾರ ನಡೆದ ಪರೀಕ್ಷೆ ವೇಳೆ ಸಾಮೂಹಿಕ ನಕಲು ನಡೆದಿದ್ದು ಒಟ್ಟು 15 ಜನ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಪ್ರಶ್ನೆ ಪ್ರತಿಕೆ ಅಭೀರಕ್ಷಕ ಬಾಲಾಜಿ ಕಾಂಬ್ಳೆ (ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ, ದಾಡಗಿ), ಕೊಠಡಿ ಮೇಲ್ವಿಚಾರಕರಾದ ಶೇಷಪ್ಪ (ಮೇಹಕರ್ ಪ್ರೌಢ ಶಾಲೆ), ಸಂಪತ (ಸರ್ಕಾರಿ ಪ್ರೌಢ ಶಾಲೆ ಲಾಧಾ), ಗೋವಿಂದ (ಸರ್ಕಾರಿ ಪ್ರೌಢ ಶಾಲೆ ಲಾಧಾ), ಕುಪೇಂದ್ರ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲವಾಡಿ), ಶಿವಾಜಿ (ಸ.ಹಿ.ಪ್ರಾಥಮಿಕ ಶಾಲೆ ನಾವದಗಿ), ಮಾರುತಿ ರಾಠೋಡ್ (ಸ.ಪ್ರೌ.ಶಾಲೆ ಕಾಕನಾಳ), ಶಿವಕುಮಾರ ಬಿರಾದಾರ್ (ಸ.ಪ್ರೌ.ಶಾ. ಮಾಸಿಮಾಡ), ಭೀಮರಾವ್ (ಸ.ಪ್ರೌ.ಶಾ.ಎ ಸಾಯಗಾಂವ್) ಸೇರಿದಂತೆ ಒಟ್ಟು ವಿವಿಧ ಶಾಲೆಗಳ 15 ಜನ ಶಿಕ್ಷಕರನ್ನು ಅಮಾನತುಗೊಳಿಸಿ ಡಿಡಿಪಿಐ ಸಲೀಂ ಪಾಷಾ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಶಾಲೆಗೆ ಚಕ್ಕರ್ ಹಾಕಿದ ಪುತ್ರ, ಬೈದು ಬುದ್ಧಿ ಹೇಳಿದ್ದಕ್ಕೆ ಮನೆಯನ್ನೇ ತೊರೆದ!
ಶಿವಾಜಿ ಪ್ರೌಢ ಶಾಲೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ ಭೇಟಿ ನೀಡಿದ್ದ ವೇಳೆ ಕೊಠಡಿ ಮೇಲ್ವಿಚಾರಕರು ಪರೀಕ್ಷೆ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದನ್ನು ಕಂಡು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಮೊದಲಿನಿಂದಲೂ ಈ ರೀತಿಯಾಗಿ ನಡೆಯುತ್ತದೆ ಎಂದು ಬೆಳಕಿಗೆ ಬಂದಿದೆ. ಹೀಗಾಗಿ ಪರೀಕ್ಷೆ ಕೊಠಡಿಯಲ್ಲಿನ ಎಲ್ಲ ಕರ್ತವ್ಯ ನಿರತ ಅಧಿಕಾರಿಗಳು, ಸಿಬ್ಬಂದಿ ಅಮಾನತುಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ಕಲಬುರಗಿಯಲ್ಲೂ ನಕಲು ಆರೋಪ: ರಾಜ್ಯಾದ್ಯಂತ ಮಾರ್ಚ್ 31 ರಿಂದ ನಡೆಯುತ್ತಿದೆ. ಇದರ ನಡುವೆ ಅಲ್ಲಲ್ಲಿ ಪರೀಕ್ಷೆಯಲ್ಲಿ ನಕಲಿ ಅಕ್ರಮವು ದಾಖಲಾಗುತ್ತಿದೆ. ಬೀದರ್ನಲ್ಲಿ ನಡೆದಂತೆ ಕಲಬುರಗಿಯ ಅಫಜಲಪುರ ತಾಲೂಕಿನ ಗೊಬ್ಬೂರ ಬಿ ಸರ್ಕಾರಿ ಫ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಮೂಹಿಕ ನಕಲು ಮಾಡಲು ಸಹಕರಿಸಿದ ಆರೋಪದಡಿ 16 ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ನಕಲು ಆರೋಪದ ಮೇಲೆ ಒಂದೇ ಪರೀಕ್ಷಾ ಕೇಂದ್ರದ ಮುಖ್ಯ ಶಿಕ್ಷಕ ಕಸ್ಟೋಡಿಯನ್ ಸೇರಿ 16 ಜನರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಅಪರ ಆಯುಕ್ತರು ಮತ್ತು ಶಿಸ್ತು ಪ್ರಾಧಿಕಾರಿಗಳು ಆಗಿರುವ ಆನಂದ ಪ್ರಕಾಶ ಮೀನಾ ಅವರು ಆದೇಶ ಹೊರಡಿಸಿದ್ದಾರೆ. ಇಲ್ಲಿ ಕೂಡ ಏಪ್ರಿಲ್ 3 ರಂದು ನಡೆಯುತ್ತಿದ್ದ ಪರೀಕ್ಷೆ ವೇಳೆ ಬಂದೋಬಸ್ತ್ ಪರಿಶೀಲನೆಗೆ ಎಂದು ಕಲಬುರಗಿಯ ಎಸ್ಪಿ ಇಶಾ ಪಂತ್ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ, ಪರೀಕ್ಷಾ ಕೇಂದ್ರದ ಕಿಟಕಿಗಳಲೆಲ್ಲ ಮೈಕ್ರೋ ಝೆರಾಕ್ಸ್, ಗೈಡ್ ಪುಸ್ತಕಗಳು ಕಂಡಿದೆ. ಹೀಗಾಗಿ ಪರಿಶೀಲನೆ ನಂತರ ಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಸಹಕಾರ ಆರೋಪ : 16 ಶಿಕ್ಷಕರು ಅಮಾನತು