ಬಸವಕಲ್ಯಾಣ: ತಾಲೂಕಿನ ವಿವಿಧಡೆ ಆಲಿಕಲ್ಲು ಸಹಿತ ಸುರಿದ ಅಕಾಲಿಕ ಮಳೆ ಜೊತೆಗೆ ಸಿಡಿಲು ಬಡಿದು 15 ಕುರಿಗಳು, 1 ಎತ್ತು ಹಾಗೂ 1 ಎಮ್ಮೆ ಮೃತಪಟ್ಟಿವೆ.
ತಾಲೂಕಿನ ಖೇರ್ಡಾ(ಬಿ) ಗ್ರಾಮದ ಬಸವರಾಜ ಕಾಳಮಂದರಗಿ ಎಂಬುವರಿಗೆ ಸೇರಿದ 15 ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಗ್ರಾಮದ ಪಕ್ಕದಲ್ಲಿರುವ ಹಟ್ಟಿಯಲ್ಲಿ ಇದ್ದ ಕುರಿಗಳಿಗೆ ಸಿಡಿಲು ಬಡಿದಿದ್ದು, ಹಟ್ಟಿಯಲ್ಲಿಯೇ ಇದ್ದ ಬಸವರಾಜ ಹಾಗೂ ಆತನ ಪತ್ನಿಗೂ ಕೂಡ ಸಿಡಿಲಿನಿಂದ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೇ ಹುಲಸೂರ ವ್ಯಾಪ್ತಿಯ ದೇವನಾಳ ಗ್ರಾಮದ ಮಸ್ತಾನ ಕಲ್ಯಾಣಿವಾಲೆ ಎಂಬುವರಿಗೆ ಸೇರಿದ ಎಮ್ಮೆ ಹಾಗೂ ಸೋಲದಾಬಕಾ ಗ್ರಾಮದ ಭೀಮರಾವ ಮೋರೆ ಎಂಬುವರಿಗೆ ಸೇರಿದ ಒಂದು ಎತ್ತು ಕೂಡ ಸಿಡಿಲಿಗೆ ಬಲಿಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮುಡಬಿ ಹಾಗೂ ಹುಲಸೂರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.