ಬಸವಕಲ್ಯಾಣ: ರಾಜ್ಯದ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣ ತಾಲೂಕಿನಲ್ಲಿ ಕೊರೊನಾ ಕಾಟ ಮುಂದುವರೆದಿದ್ದು, ಇಂದು ಮತ್ತೆ 12 ಪ್ರಕರಣಗಳು ಪತ್ತೆಯಾಗುವ ಮೂಲಕ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಿಸಿದೆ.
ಕೇವಲ ಮೂರು ದಿನಗಳಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ತಲುಪಿದರೆ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಈಗ 40ಕ್ಕೆ ಏರಿದೆ. ಮಂಗಳವಾರ ಒಂದೇ ದಿನ ಕೋಹಿನೂರನಲ್ಲಿ 10 ಜನಲ್ಲಿ ಸೋಂಕು ಪತ್ತೆಯಾಗಿತ್ತು. ಬುಧವಾರವೂ ಕೋಹಿನೂರನಲ್ಲಿ 4 ಜನ ಸೇರಿ ತಾಲೂಕಿನಲ್ಲಿ 12 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಇಂದು ಕೂಡ ಕೊರೊನಾ ಆರ್ಭಟ ಮುಂದುವರೆದಿದ್ದು, ಜನರ ನಿದ್ದೆಗೆಡಿಸಿದೆ. ತಾಲೂಕಿನ ಗೋಕುಳ ಗ್ರಾಮದ ಇಬ್ಬರು ಮಹಿಳೆಯರು ಸೇರಿ 3 ಜನ. ಕಿಟ್ಟಾ ಗ್ರಾಮದಲ್ಲಿ ಇಬ್ಬರು ಮಹಿಳೆಯರು, ರಾಜೇಶ್ವರನಲ್ಲಿ 6 ಮತ್ತು 10 ವರ್ಷದ ಇಬ್ಬರು ಬಾಲಕರು ಸೇರಿ 3 ಜನ, ಮಂಠಾಳನಲ್ಲಿ 3 ಜನ ಹಾಗೂ ಹತ್ಯಾಳನ ಒಬ್ಬರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಇವರನ್ನು ಬೀದರ್ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.
ಇಂದು ಸೋಂಕು ದೃಢಪಟ್ಟವರೆಲ್ಲರು ಮಹಾರಾಷ್ಟ್ರದ ಮುಂಬೈನಿಂದ ಬಂದವರಾಗಿದ್ದು, ಇವರನ್ನ ಆಯಾ ಗ್ರಾಮಗಳಲ್ಲಿ ಆರಂಭಿಸಲಾದ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು, ಗ್ರಾಮೀಣ ಪ್ರದೇಶದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂಬೈನಿಂದ ಆಗಮಿಸಿದ ಸಾವಿರಾರು ಜನ ನಗರ ಸೇರಿದಂತೆ ತಾಲೂಕಿನ ವಿವಿಧ ಕ್ವಾರಂಟೈನ್ ಕೇಂದ್ರದಲ್ಲಿದ್ದು, ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸುವ ಕೆಲಸಕ್ಕೆ ವೇಗ ನೀಡಲಾಗಿದೆ.
ಇನ್ನು ಎಷ್ಟು ಜನರಿಗೆ ಪಾಸಿಟಿವ್ ಬರಲಿದೆ ಎನ್ನುವ ಆತಂಕ ಜನರನ್ನು ಕಾಡುತ್ತಿದೆ. ಹೊರ ರಾಜ್ಯದಿಂದ ಬಂದವರನ್ನು ಮುಂಜಾಗೃತಾ ಕ್ರಮವಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಇರಲು ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರದ ಮಾರ್ಗಸೂಚಿಯಂತೆ ಆಡಳಿತದಿಂದ ಗ್ರಾಮಗಳಲ್ಲಿ ಅಗತ್ಯವಿರುವ ಮುಂಜಾಗೃತಾ ಕ್ರಮಗಳನ್ನು ಕ್ರಮಗೊಳ್ಳಲಾಗುತ್ತಿದೆ.
ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆ: ತಾಲೂಕಿನಲ್ಲಿ ಗುರುವಾರ 12 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಮಂಗಳವಾರ 10 ಜನ, ಬುಧವಾರ 12 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿಂದೆ ಧನ್ನೂರ(ಕೆ)ವಾಡಿಯ 3 ಜನ ಮತ್ತು ಉಜಳಂಬನಲ್ಲಿ ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ನಗರದ ವ್ಯಕ್ತಿಯೊಬ್ಬರಲ್ಲಿ ಸೋಂಕಿರುವುದು ಏ. 2ರಂದು ದೃಢಪಟ್ಟಿತ್ತು. ಬೀದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.