ಬೀದರ್ : ಸಿನಿಮೀಯ ರೀತಿ ಲಕ್ಷಾಂತರ ರೂ ಮೌಲ್ಯದ ಮದ್ಯ ಲೂಟಿ ಹೊಡೆದ ಖದೀಮರನ್ನು ಹುಮನಾಬಾದ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿ ಮಾಲೀಕ ಯಶವಂತ, ಮುಸ್ತಾಫ, ಭೀಮಾಶಂಕರ, ಅಂಬರೀಶ್ ಸೇರಿದಂತೆ 10 ಜನ ಬಂಧಿತರು. ಪ್ರಕರಣದ ಕಿಂಗ್ ಪಿನ್ ಆಕಾಶ್ ಸೇರಿದಂತೆ ನಾಲ್ವರು ನಾಪತ್ತೆಯಾಗಿದ್ದು, ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಡಿ.12 ರಂದು ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಸ್ ಬಳಿ ಮದ್ಯ ಸಾಗಿಸುವಾಗ ಲಾರಿಯನ್ನು ಬೇಕಂತಲೇ ಗುಂಡಿಗೆ ಹಾಯಿಸಿ, ಅಪಘಾತವಾಗಿದೆ ಎಂದು ಬಿಂಬಿಸಲು ಕಿರಾತಕರು ಯತ್ನಿಸಿದ್ದಾರೆ.
ಲಾರಿಯಲ್ಲಿದ್ದ 1,100 ಮದ್ಯದ ಕಾಟನ್ಗಳ ಪೈಕಿ 525 ಕಾಟನ್ ಕಳ್ಳತನ ಮಾಡಲಾಗಿದೆ. ಲಾರಿ ಅಪಘಾತವಾದಾಗ ಸ್ಥಳೀಯರು ಸಾರಾಯಿ ಕಳ್ಳತನ ನಡೆಸಿದಾರೆಂದು ಬಿಂಬಿಸಲು ಆರೋಪಿಗಳು ಯತ್ನಿಸಿದ್ದಾರೆ. ಅದರಂತೆ ಅಪಘಾತದ ಬಳಿಕ ಚಾಲಕ ಹುಮನಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಕಳ್ಳತನ ಬಗ್ಗೆ ರಾಯಬಾಗ ಕಂಪನಿ ಮಾಲೀಕ ಅನುಮಾನ ವ್ಯಕ್ತಪಡಿಸಿದ್ದಕ್ಕೆ ತನಿಖೆ ನಡೆಸಿದ ಪೊಲೀಸರು ಇದೀಗ ಸತ್ಯ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 36 ಕೇಸ್ಗಳಲ್ಲಿ ಭಾಗಿ.. ಮೂರು ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ ಇರಾನಿ ಗ್ಯಾಂಗ್ ಸದಸ್ಯ
ಹುಮನಾಬಾದ್ ಸಿಪಿಐ ಶರಣಬಸಪ್ಪ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ್ ಪಾಟೀಲ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ, ಬಂಧಿತರಿಂದ 30,63,855 ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ 1 ಲಾರಿ, 1 ಬೊಲೆರೋ ಗೂಡ್ಸ್ ವಾಹನ, ಮೂರು ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.