ಬಳ್ಳಾರಿ : ಹೊಸ ವರ್ಷಾಚರಣೆಗೆ ಕೇಕ್ ತರಲು ಹೋಗಿದ್ದ ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ವಡ್ಡರಬಂಡೆಯಲ್ಲಿರುವ ಬೇಕರಿವೊಂದರ ಬಳಿ ಭಾನುವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಆರ್ ಕೆ ಕಾಲೊನಿಯ ನಿವಾಸಿ ಸೈಯದುಲ್ಲಾ (24) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬಾಪೂಜಿ ನಗರದ ನಿವಾಸಿ ರಜಾಕ್ ಅಲಿ (26) ಗಾಯಗೊಂಡಿದ್ದು, ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾತ್ರಿ ಸುಮಾರು 8.30ಕ್ಕೆ ಸೈಯದುಲ್ಲಾ ಮತ್ತು ರಜಾಕ್ ಅಲಿ ಹೊಸ ವರ್ಷಾಚರಣೆಗೆ ಕೇಕ್ ತರಲು ವಡ್ಡರಬಂಡೆಯಲ್ಲಿರುವ ಬೇಕರಿಯೊಂದಕ್ಕೆ ಬಂದಿದ್ದರು. ಈ ವೇಳೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದು, ಸೈಯದುಲ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಜಾಕ್ ಅಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಸಂಬಂಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಪ್ರಕರಣ- ವಿಜಯಪುರದಲ್ಲಿ ಯುವಕನ ಹತ್ಯೆ : ಹಾಡಹಗಲೇ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದ ಘಟನೆ ವಿಜಯಪುರದ ಹಕೀಂ ಚೌಕ್‌ನಲ್ಲಿ ಇತ್ತೀಚೆಗೆ ನಡೆದಿತ್ತು. ಮೃತ ಯುವಕನನ್ನು ಮಹಾರಾಷ್ಟ್ರದ ಪುಣೆ ನಿವಾಸಿ ಅಯಾನ್ ಶೇಖ್ (19) ಎಂದು ಗುರುತಿಸಲಾಗಿತ್ತು. ಚಪ್ಪರಬಂದ್ ಕಾಲೊನಿ ನಿವಾಸಿ ಹುಸೇನ್ ಸಾಬ್ (22) ನಂದಿಹಾಳ ಕೊಲೆಗೈದ ಆರೋಪಿ. ಕೊಲೆ ಬಳಿಕ ಪರಾರಿಯಾಗಿದ್ದ ಹುಸೇನ್ನನ್ನು ಪೊಲೀಸರು ಬಂಧಿಸಿದ್ದರು. ಘಟನೆ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಯಾನ್ ಶೇಖ್ ತನ್ನ ಸ್ನೇಹಿತನ ಮದುವೆಗೆಂದು ಪುಣೆಯಿಂದ ಬಂದಿದ್ದನು. ಈ ವೇಳೆ ಕೃತ್ಯ ನಡೆದಿತ್ತು. ಹುಡುಗಿಯ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.
''ಮೃತ ಯುವಕ ಅಯಾನ್ ಪುಣೆ ನಿವಾಸಿಯಾಗಿದ್ದು ತನ್ನ ಸ್ನೇಹಿತನ ಮದುವೆ ನಿಮಿತ್ತ ಇಲ್ಲಿಗೆ ಆಗಮಿಸಿದ್ದನು. ಈ ವೇಳೆ ಈ ಕೃತ್ಯ ನಡೆದಿದೆ. ತನ್ನ ನಿಶ್ಚಿತಾರ್ಥ ಹಾಳಾಗಿದ್ದಕ್ಕೆ ಅಯಾನ್ ಶೇಖ್ ಕಾರಣವೆಂದು ತಿಳಿದು ಆರೋಪಿ ಹುಸೇನ್ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಕೊಲೆ ಆರೋಪಿ ಹುಸೇನ್ಸಾಬ್ನನ್ನು ಬಂಧಿಸಲಾಗಿದೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದರು.
ಇದನ್ನೂ ಓದಿ : ಮೈಸೂರಲ್ಲಿ ವೃದ್ಧೆಯ ಸರ ಕದ್ದು ಹೋಂ ನರ್ಸ್ ಪರಾರಿ; 48 ಗಂಟೆಯಲ್ಲಿ ಆರೋಪಿ ಸೆರೆ