ಬಳ್ಳಾರಿ: ನಗರದ ಕಪ್ಪಗಲ್ಲು ನಿವಾಸಿ ಛಾವ ಸಾತ್ವಿಕ್ ಬಳಿ ಪ್ರಪಂಚದ 120 ದೇಶಗಳ ನಾಣ್ಯಗಳು ಮತ್ತು ನೋಟುಗಳ ಅಪರೂಪದ ಸಂಗ್ರಹವಿದೆ.
ನಾಣ್ಯಗಳು ಮತ್ತು ನೋಟು ಸಂಗ್ರಹಿಸಿರುವ ಯುವಕ ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ.
ಯಾವ ಯಾವ ದೇಶಗಳ ನಾಣ್ಯಗಳು, ನೋಟುಗಳಿವೆ?
ಭಾರತ, ಆಫ್ರಿಕಾ, ಅಮೆರಿಕ, ಚೀನಾ, ಬ್ರಿಟನ್, ಪೋರ್ಚುಗಲ್ ಸೇರಿ 120 ದೇಶದ ನಾಣ್ಯಗಳು ಮತ್ತು ನೋಟುಗಳು ಇವರಲ್ಲಿವೆ. ಮೆಟಲ್, ಸಿಲ್ವರ್, ಪ್ಲಾಸ್ಟಿಕ್, ಐರನ್ ಮತ್ತು ಕಾಪರ್ ಮಿಶ್ರಣ, ಕಾಪರ್ ಮತ್ತು ಬೇರೆ ಮೆಟಲ್ ಜೊತೆಗೆ ಜಿಂಕ್ ಸಹ ಮಿಶ್ರಣ ಮಾಡಿದ ನಾಣ್ಯಗಳು ತನ್ನ ಬಳಿ ಇವೆ ಎನ್ನುತ್ತಾರೆ ಸಾತ್ವಿಕ್. ದೇಶದ ಪುರಾತನ ರಾಜಮನೆತನಗಳ ನಾಣ್ಯಗಳು, ಬ್ರಿಟಿಷ್ ಇಂಡಿಯಾ ಬಿಡುಗಡೆ ಮಾಡಿದ ನಾಣ್ಯಗಳು ಹೀಗೆ ಒಂದು ಪೈಸೆಯಿಂದ 10, 20, 50,1,000, 2,000 ರೂಪಾಯಿ ಬ್ಯಾನ್ ಆಗಿರುವ ನೋಟುಗಳು ಸಹ ಇವೆ.
ಎಷ್ಟು ನಾಣ್ಯಗಳು, ನೋಟುಗಳಿವೆ ?
ಅಂತಾರಾಷ್ಟ್ರೀಯ ಮಟ್ಟದ 370 ನೋಟುಗಳು, ಭಾರತದ 1,000 ನೋಟುಗಳು, 100 ಬ್ರಿಟಿಷ್ ಇಂಡಿಯಾ ನಾಣ್ಯಗಳು, ಪ್ರಸ್ತುತ ಭಾರತದ 200 ಕ್ಕಿಂತ ಹೆಚ್ಚಿನ ನಾಣ್ಯಗಳು ಇವರ ಬಳಿ ಇವೆ.
ನನ್ನ ಚಿಕ್ಕಪ್ಪ ಸಿಂಗಾಪುರದಲ್ಲಿದ್ದು ಪ್ರಪಂಚದ ವಿವಿಧ ದೇಶಗಳ ನಾಣ್ಯಗಳ ಮತ್ತು ನೋಟುಗಳ ಸಂಗ್ರಹಣೆ ಮಾಡುವ ಆಸಕ್ತಿ ಹೊಂದಿದ್ದಾರೆ. ಅವರಿಂದ ಪ್ರೇರಿತರಾಗಿ ನಾನು ಕೂಡಾ ಈ ರೀತಿಯಾಗಿ ನೋಟು, ನಾಣ್ಯಗಳ ಸಂಗ್ರಹಣೆಯ ಜೊತೆಗೆ ಆ ದೇಶದ ಇತಿಹಾಸವನ್ನು ತಿಳಿಯುತ್ತಿದ್ದೇನೆ ಎಂದು ಛಾವ ಸಾತ್ವಿಕ್ ತಿಳಿಸಿದರು.