ವಿಜಯನಗರ: ವಿಶ್ವ ಪಾರಂಪರಿಕ ತಾಣ ಹಂಪಿಯ ಹೇಮಕೂಟ ಪರ್ವತದ ಜೈನ ದೇವಾಲಯದ ಸ್ಮಾರಕದ ಮೇಲೆ ನೃತ್ಯ ಮಾಡಿದ ವ್ಯಕ್ತಿ ವಿರುದ್ಧ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯ ಮೂಲದ ದೀಪಕ್ ಗೌಡ ಎಂಬವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಹಂಪಿಯ ಸ್ಮಾರಕದ ಮೇಲೆ ಕುಣಿದು ಕುಪ್ಪಳಿಸಿದ ವಿಡಿಯೋ ತುಣಕನ್ನು ದೀಪಕ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು, ಈ ವಿಡಿಯೋ ವೈರಲ್ ಕೂಡಾ ಮಾಡಿದ್ದರು.
ನೆಟ್ಟಿಗರು ಹಾಗೂ ಸ್ಮಾರಕ ಪ್ರಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಖಂಡಿಸಿದ್ದರು. ವಿಜಯನಗರ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅವರು ಕೂಡ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಫೆಬ್ರವರಿ 26 ರಂದು ಸಂಜೆ ದೀಪಕ್ ಗೌಡ ಅವರು ಸ್ಮಾರಕದ ಮೇಲೆ ನೃತ್ಯ ಮಾಡಿದ್ದರು. ಸರ್ಕಾರಿ ಉದ್ಯೋಗಿಯಾಗಿರುವ ಸುನೀಲ್ ಕುಮಾರ್ ಅವರು ತಮ್ಮ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ತಡವಾಗಿ ಈ ಕುರಿತು ಹಂಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಶ್ರೀಹರಿಬಾಬು ಪ್ರಕರಣ ದಾಖಲಿಸಿ, ಕ್ರಮ ವಹಿಸಿದ್ದಾರೆ.
ದೂರಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಂಪಿ ವಲಯಕ್ಕೆ ಬರುವ ಹೇಮಕೂಟದಲ್ಲಿರುವ ಜೈನ ದೇವಸ್ಥಾನವನ್ನು ಪ್ರವಾಸಿಗರಿಗೆ ವೀಕ್ಷಣೆ ಮಾಡಲು ಮಾತ್ರ ಅವಕಾಶವಿದೆ. ಸ್ಮಾರಕಗಳ ಮೇಲೆ ಏರಲು ಅವಕಾಶ ಇರುವುದಿಲ್ಲ. ಆದರೆ, ಈ ಯುವಕ ಸ್ಮಾರಕದ ಮೇಲೆ ಏರುವುದು ನಿಷೇಧ ಎಂದು ತಿಳಿದೂ ಫೆ. 26 ರಂದು ಸಂಜೆ ಸ್ಮಾರಕದ ಮೇಳೇರಿ ಸ್ಮಾರಕಕ್ಕೆ ಧಕ್ಕೆ ತಂದಿದ್ದಾರೆ. ಅದರ ಮೇಲೆ ಏರಿರುವುದು ಮಾತ್ರವಲ್ಲದೇ ನೃತ್ಯ ಮಾಡಿ ಅದನ್ನು ಚಿತ್ರೀಕರಣವೂ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಫಾಲೋವರ್ಸ್ ಜಾಸ್ತಿ ಮಾಡುವ ಆಸೆಯಿಂದ ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ಇದರಿಂದ ಹಂಪಿಗೆ ಪ್ರವಾಸಕ್ಕೆ ಎಂದು ಬರುವ ಪ್ರವಾಸಿಗರು ಇಂತಹ ವಿಡಿಯೋಗಳನ್ನು ನೋಡಿ, ದುರುಪಯೋಗ ಮಾಡಿಕೊಳ್ಳುವ ಸಂಭವವಿರುತ್ತದೆ. ಈ ಬಗ್ಗೆ, ತಮ್ಮ ಮೇಲಧಿಕಾರಿಗಳ ಬಳಿ ಚರ್ಚಿಸಿ ತಡವಾಗಿ ದೂರು ನೀಡಿದ್ದೇನೆ. ಸ್ಮಾರಕಕ್ಕೆ ಧಕ್ಕೆ ತರುವ ಉದ್ದೇಶದಿಂದ ಸ್ಮಾರಕದ ಮೇಲೆ ಏರಿ ವಿಡಿಯೋ ಚಿತ್ರೀಕರಿಸಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ವೈರಲ್ ಮಾಡಿರುವ ದೀಪಕ್ ಗೌಡ ಅವರ ಮೇಲೆ ಸೂಕ್ತ ಕಾನೂನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಲಿಖಿತ ದೂರಿನ ಜೊತೆಗೆ ಸುನೀಲ್ ಅವರು ಯುವಕ ನೃತ್ಯ ಮಾಡಿರುವ ವಿಡಿಯೋ ಇರುವ ಸಿಡಿಯನ್ನೂ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ಕ್ಷಮೆಯಾಚಿಸಿದ ಯುವಕ: ಹಂಪಿ ಸ್ಮಾರಕ ಮೇಲೆ ನೃತ್ಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಪಿ ಪೊಲೀಸರು ಪ್ರಕರಣ ದಾಖಲು ಮಾಡುತ್ತಿದಂತೆ ಇತ್ತ ದೀಪಕ್ ಗೌಡ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಕ್ಷಮೆ ಯಾಚಿಸಿ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಸ್ಪರ್ಶ: ಪ್ರವಾಸಿಗರಿಗೆ ಏಕರೂಪ ಟಿಕೆಟಿಂಗ್ ವ್ಯವಸ್ಥೆ!