ಬಳ್ಳಾರಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ಖಾಸಗಿ ಕಾಲೇಜಿನ ಆವರಣದಲ್ಲಿಂದು ನಡೆದ ಯೋಗ ತರಬೇತಿ ಶಿಬಿರದಲ್ಲಿ ನೂರಾರು ಯುವತಿಯರು ಭಾಗವಹಿಸಿದ್ದರು.
ಬೆಳಗಿನ ಜಾವ 5.30ರ ಸುಮಾರಿಗೆ ನೂರಾರು ಯುವತಿಯರು ಸಾಲುಗಟ್ಟಿ ಕುಳಿತುಕೊಂಡೇ ಯೋಗಾಭ್ಯಾಸದಲ್ಲಿ ತೊಡಗುವ ಮುಖೇನ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮುನ್ನಾ ದಿನವೇ ವಿವಿಧ ಪ್ರಕಾರಗಳ ಯೋಗಾಭ್ಯಾಸದ ಮೂಲಕ ತಾಲೀಮು ನಡೆಸಿದರು.
ನೂರಾರು ಯುವತಿಯರು ಸುಮಾರು ಒಂದೂವರೆ ಗಂಟೆಗೂ ಅಧಿಕ ಸಮಯ ಯೋಗಾಭ್ಯಾಸ ಮಾಡಿದರು. ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಾಂಕಾಸನ, ವಕ್ರಾಸನ, ಭುಜಂಗಾಸನ, ಪೂರ್ಣ ಭುಜಂಗಾಸನ, ಶಲಭಾಸನ, ಮಕರಾಸನ, ಸೇತುಬಂದಾಸನ, ಪಾದ ಮುಕ್ತಾಸನ, ಶವಾಸನ, ಕಪಾಲಭಾತಿ, ಅನುಲೋಮ-ವಿಲೋಮ, ಭ್ರಾಮರಿ ಪ್ರಾಣಯಾಮ, ಶಂಖ ಭ್ರಾಮರಿ ಪ್ರಾಣಯಾಮ, ಧ್ಯಾನ ಸಂಭವಿ ಮುದ್ರಾ ಇತ್ಯಾದಿ ಆಸನಗಳನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸಿದರು.
ಧ್ಯಾನಾಸಕ್ತರಾದ ಯುವತಿಯರು: ನೂರಾರು ಯುವತಿಯರು ಧ್ಯಾನಾಸಕ್ತರಾದಾಗ ಇಡೀ ಆವರಣದಲ್ಲೇ ನಿಶಬ್ಧತೆ ನೆಲೆಸಿತ್ತು. ವಿಭಿನ್ನ ರೀತಿಯ ನಗೆ ಹಾಗೂ ಸಿಂಹ ಘರ್ಜನೆಯಲ್ಲಂತೂ ಯುವತಿಯರದ್ದೇ ಬಲು ಜೋರಾಗಿತ್ತು. ನಾಲಿಗೆಯನ್ನು ಮುಂದೆ ಚಾಚಿ, ದೇಹದೊಳಗಿಂದ ಬರುವ ಸಿಂಹ ಘರ್ಜಿಸುವ ಸದ್ದು ಇಡೀ ಆವರಣವನ್ನೇ ಆವರಿಸಿತ್ತು.
ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಇಸ್ವಿ ಪಂಪಾಪತಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಈ ಯೋಗಾಭ್ಯಾಸ ಬಹು ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಕೂಡ ಯೋಗಾಭ್ಯಾಸದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕೆಂದಿದ್ದಾರೆ. ನಾಳೆ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೈದಿಗಳಿಗೂ ಕೂಡ ಯೋಗಾಭ್ಯಾಸದ ಶಿಬಿರ ನಡೆಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.