ವಿಜಯನಗರ: ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು ಎಂದು ಕೋಡಿಮಠದ ಪೀಠಾಧ್ಯಕ್ಷ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ. ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, 2023 ಕ್ಕೆ ಜಾಗತಿಕ ಮಟ್ಟದಲ್ಲಿ ಈ ರೀತಿ ಸಮಸ್ಯೆ ಎದುರಾಗಲಿದೆ. ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಾಡುತ್ತದೆ. ಸಾಧು ಸಂತರಿಗೆ ಸಮಸ್ಯೆಯಾಗಲಿದೆ. ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ ಎಂದ ಶ್ರೀಗಳು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಮಾಡುವುದಿಲ್ಲ ಎಂದರು.
ಹಿಂದೂ ಸಂಪ್ರದಾಯದ ಪ್ರಕಾರ ಸಂಕ್ರಾಂತಿ ಫಲ ಹಾಗೂ ಯುಗಾದಿ ಫಲ ಹೇಳುತ್ತಾರೆ. ಇಂತಿಂತ ಫಲ ಇಂತಿಂತವರಿಗೆ ಎಂದು ಬರುತ್ತದೆ. ಸಂಕ್ರಾಂತಿಗೆ ಇನ್ನೂ ಒಂದು ದಿನವಿದೆ. ಯುಗಾದಿಗೆ ಇನ್ನೂ ಎರಡು ತಿಂಗಳುಗಳಿವೆ. ಆಶುಭ ದಿನಗಳ ಕಳೆಯದೆ ಫಲವನ್ನು ಹೇಳುವಂತಿಲ್ಲ. ಯಾವುದೇ ಭವಿಷ್ಯವನ್ನು ಹೇಳಬೇಕಾದರೆ ಅದಕ್ಕೆ ಒಂದು ಅವಧಿ ಅಂತಿದೆ. ಅದರ ನಂತರವೇ ಹೇಳಬೇಕು. ಸಂಕ್ರಾಂತಿ, ಯುಗಾದಿ ನಂತರ ಮತ್ತೆ ಮಳೆ ಬರುವ ಲಕ್ಷಣ ಇದೆ. ಕಳೆದ ವರ್ಷ ಹೇಗಾಯಿತೋ ಅದೇ ರೀತಿ ಈ ವರ್ಷವೂ ಸಂಭವಿಸುವ ಸಾಧ್ಯತೆಯಿದೆ.
ಜಾಗತಿಕವಾಗಿ ಬರುವ ಸಮಸ್ಯೆ ಹೇಳಬೇಕಾದರೆ ಒಲೆ ಹೊತ್ತಿ ಉರಿದರೆ ಸಹಿಸಿಕೊಳ್ಳಬಹುದು ಅಥವಾ ಅದರಿಂದ ಅಡುಗೆ ಮಾಡಿಕೊಳ್ಳಬಹುದು. ಆದರೆ, ಧರೆಯೇ ಹೊತ್ತಿ ಉರಿದರೆ ಅದನ್ನು ಎದುರಿಸಲು ಸಾಧ್ಯವಿಲ್ಲ. ಅಂತಹ ಪ್ರಸಂಗ ಇಡೀ ಜಗತ್ತಿಗೆ ಆವರಿಸುತ್ತದೆ. 2023ರಲ್ಲಿ ಜಗತ್ತೇ ಎದ್ದು ನಿಲ್ಲಕ್ಕಾಗದಂತಹ ಪರಿಸ್ಥಿತಿ ಬರುವ ಲಕ್ಷಣ ಇದೆ. ಸಾಧು ಸಂತರಿಗೆ ತೊಂದರೆ ಆಗುವ ಲಕ್ಷಣ ಇದೆ. ಎರಡ್ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ. ಕೊರೊನಾ ನಾಲ್ಕನೇ ಅಲೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಇನ್ನೂ ಹೆಚ್ಚಿನ ರಾಜಕೀಯ ಭವಿಷ್ಯ ಹೇಳಬೇಕಾದರೆ ಸಂಕ್ರಾಂತಿ ಕಳಿಯಲಿ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಈ ಹಿಂದೆಯೂ ಭವಿಷ್ಯ ನುಡಿದ್ದಿದ್ದ ಶ್ರೀಗಳು: ಈ ಹಿಂದೆಯೂ ಹಲವಾರು ಭವಿಷ್ಯಗಳನ್ನು ನುಡಿದಿದ್ದರು. 2022ರ ಆಗಸ್ಟ್ನಲ್ಲಿ ಭವಿಷ್ಯ ನುಡಿದಿದ್ದ ಕೋಡಿಮಠ ಶ್ರೀಗಳು, ಕಾರ್ತಿಕ ಮಾಸದಲ್ಲಿ ಹಲವಾರು ಕೆಡುಕುಗಳು ಸಂಭವಿಸಬಹುದು. ಅತಿಯಾದ ಮಳೆಯಾಗಿ, ಮೇಘಸ್ಪೋಟಗೊಳ್ಳಬಹುದು. ಅಕಾಲಿಕ ಮಳೆಯಾಗಿ ರೋಗ ರುಜಿನಗಳು ಹೆಚ್ಚಾಗುಬಹುದು ಎಂದಿದ್ದರು. ಸೆಪ್ಟೆಂಬರ್ನಲ್ಲಿ ಮಳೆ ಅನಾಹುತ ಎದುರಿಸುತ್ತಿದ್ದ ಸಂದರ್ಭದಲ್ಲಿ ಮತ್ತೆ ಭವಿಷ್ಯ ನುಡಿದಿದ್ದ ಅವರು ಮಳೆ ಅನಾಹುತ ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ. ಸುನಾಮಿ ಬರುವ ಸಾಧ್ಯತೆಯೂ ಇದೆ. ಜನರು ಮನೆಯಿಂದ ಹೊರಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ. ಭೂಮಿಯಿಂದ ಹೊಸ ಹೊಸ ವಿಷಜಂತುಗಳು ಉದ್ಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದರು.
ಕೊರೊನಾ ಬಗ್ಗೆ ಈ ಹಿಂದೆಯೇ ನಾನು ಹೇಳಿದ್ದೆ, ಅಲ್ಲದೇ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ. ಇದೀಗ ನಾನು ಹೇಳಿದ ಎಲ್ಲ ಮಾತುಗಳು, ಭವಿಷ್ಯಗಳು ನಿಜವಾಗಿದೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಎದುರಾಗಲಿದೆ ಎಂದು ಹೇಳಿದ್ದರು. ಅಕ್ಟೋಬರ್ ಸಮಯದಲ್ಲಿ ಮಾತನಾಡಿದ್ದ ಸ್ವಾಮೀಜಿ, ರಾಜ ಭೀತಿ, ಯುದ್ಧ ಭೀತಿ ಸೇರಿದಂತೆ ಲೋಕ ಕಂಟಕ, ಪ್ರಾಕೃತಿಕ ಕಂಟಕ, ಪ್ರಾದೇಶಿಕ ಕಂಟಕ ಭೂಕಂಪನ ಹೀಗೆ ನಾನಾ ದುಷ್ಪರಿಣಾಮಗಳನ್ನು ಮನುಕುಲ ಎದುರಿಸಲಿದೆ ಎಂದು ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ: ಲೋಕಕಂಟಕ ಪ್ರಕೃತಿ ಕಂಟಕ ಉಂಟಾಗಿ ಮನುಷ್ಯ ಹುಚ್ಚನಾಗುತ್ತಾನೆ: ಕೋಡಿಮಠ ಶ್ರೀ ಭವಿಷ್ಯ