ಬಳ್ಳಾರಿ: ವಿಷಕಾರಿ ಹಾವುಗಳು ಯಾರಿಗೂ ಕಚ್ಚೋದಿಲ್ಲ, ಅವುಗಳಿಗೆ ಯಾರಾದರೂ ತೊಂದರೆ ಮಾಡಿದರೆ ಮಾತ್ರ ಕಚ್ಚುತ್ತವೆ. ಹೀಗಾಗಿ, ನನಗೆ ಹಾವುಗಳೆಂದರೆ ಭಯವೂ ಇದೆ. ಅಷ್ಟೇ ಪ್ರೀತಿಯೂ ಇದೆ ಎಂದು ಉರಗ ರಕ್ಷಕ ಹಾಗೂ ಯುವ ವೈದ್ಯ ತಮ್ಮ ಅನುಭವದ ಮಾತನ್ನು ಹೇಳಿದ್ದಾರೆ.
ಸಾಮಾನ್ಯವಾಗಿ ಹಾವುಗಳೆಂದರೆ ಎಲ್ಲರಲ್ಲೂ ಭಯವಿರುತ್ತೆ. ಅವು ಸುಮ್ಮನೇ ಕಚ್ಚುತ್ತವೆ, ಹಾವು ಕಚ್ಚಿದರೆ ಸಾಯುತ್ತಾರೆಂಬ ತಪ್ಪು ಗ್ರಹಿಕೆ ನಮ್ಮ ಜನರಲ್ಲಿದೆ. ಹೀಗಾಗಿ, ಹಾವು ಕಡಿತಕ್ಕೆ ಒಳಗಾದವರು ನೇರವಾಗಿ ಸಮೀಪದ ಆಸ್ಪತ್ರೆಗೆ ಬಾರದೇ ನಾಟಿ ವೈದ್ಯರ ಬಳಿ ಹೋಗಿ ಯಡವಟ್ಟು ಮಾಡಿಕೊಂಡು ತಮ್ಮ ಸಾವಿಗೆ ತಾವೇ ಕಾರಣರಾಗುತ್ತಾರೆ. ಹೀಗಾಗಿ, ನಮ್ಮ ದೇಶದಲ್ಲಿ ಕಳೆದ 20 ವರ್ಷಗಳಿಂದ ಅಂದಾಜು 12 ಲಕ್ಷಕ್ಕೂ ಅಧಿಕ ಮಂದಿ ಹಾವು ಕಡಿತಕ್ಕೊಳಗಾಗಿ ನಾಟಿ ಔಷಧಿಯ ಮೊರೆ ಹೋಗಿ ಸಾವನ್ನಪ್ಪುವುದು ದುರದೃಷ್ಟಕರ ಸಂಗತಿ ಎಂದು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಡಾ. ಅಶೋಕಕುಮಾರ ಬೇಸರ ವ್ಯಕ್ತಪಡಿಸಿದರು.
ಎಂಬಿಬಿಎಸ್ ಜೊತೆ ಉರಗಗಳ ರಕ್ಷಣೆಯಲ್ಲಿ ಯುವ ವೈದ್ಯ: ಸತತ ನಾಲ್ಕು ವರ್ಷಗಳಿಂದಲೂ ನಾನು ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹಾವುಗಳನ್ನ ಹಿಡಿಯುತ್ತಿದ್ದೇನೆ. ಈವರೆಗೆ 675 ಕ್ಕೂ ಅಧಿಕ ಹಾವುಗಳನ್ನ ಜೀವಂತವಾಗಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟುಬಂದಿರುವೆ. ಜಿಲ್ಲೆಯಲ್ಲಿ 26 ಪ್ರಭೇದದ ಹಾವುಗಳಿವೆ. ಆ ಪೈಕಿ ಈಗಾಗಲೇ ನಾನು 13 ಪ್ರಭೇದದ ಹಾವುಗಳನ್ನ ನಾನಾ ಪ್ರದೇಶಗಳಲ್ಲಿ ಸೆರೆ ಹಿಡಿದು ರಕ್ಷಣೆ ಮಾಡಿದ್ದೇನೆ. ನನ್ನ ಗುರುಗಳಾದ ಕಾಶೀನಾಥ್ ನೆಗಳೂರುಮಠ ಅವರೇ ನನಗೆ ಸ್ಫೂರ್ತಿ ಎಂದು ಡಾ. ಅಶೋಕಕುಮಾರ್ ಹೇಳಿದರು.
ಮೊದಲು ಕಾಲೇಜು ಕ್ಯಾಂಪಸ್ನಲ್ಲೇ ನಾನು ಮೊದಲ ಹಾವು ಹಿಡಿದದ್ದು. ಅದನ್ನ ನೋಡಿದ ಕ್ಯಾಂಪಸ್ ನಲ್ಲಿರೊ ವಿದ್ಯಾರ್ಥಿಗಳು ನನಗೆ ಹೆದರಿಸಿದ್ದರು. ಅದು ತಲೆಗೆ ಕಚ್ಚುತ್ತೆ, ಅದನ್ನ ಸಾಯಿಸು ಎಂದಿದ್ದರು. ಆಗ ನಾನು ಹೆದರಿದೆ. ಎರಡನೇ ಬಾರಿಗೆ ಕೆರೆ ಹಾವನ್ನ ಸೆರೆಹಿಡಿದೆ. ಆಗ ಕೂಡ ನಾನು ಹೆದರಿದೆ ಎಂದು ತಮಗಾದ ಅನುಭವವನ್ನ ಹಂಚಿಕೊಂಡರು.
ಈ ಭೂಮಂಡಲದಲ್ಲಿ ಆರು ಪ್ರಭೇದದ ವಿಷಪೂರಿತ ಹಾವುಗಳು ಮಾತ್ರ ಇವೆ. ಅವುಗಳು ತಮಗೇನಾದರು ತೊಂದರೆ ಉಂಟಾದರೆ ಮಾತ್ರ ಕಚ್ಚುತ್ತವೆ. ನಾಗರಹಾವು, ಕೆರೆಹಾವು, ಹಸಿರು ಹಾವು ಹೆಚ್ಚಾಗಿ ನಮ್ಮಲ್ಲಿ ಕಾಣಸಿಗುತ್ತವೆ. ಕಟ್ಟುಹಾವು, ಕೊಳಕು ಮಂಡಲ, ಗರಗಸ ಮಂಡಲ ಸೇರಿದಂತೆ ಇನ್ನಿತರೆ ಪ್ರಭೇದದ ಹಾವುಗಳಿವೆ.
ಹಾವುಗಳನ್ನ ಸಾಯಿಸಬೇಡಿ: ಯಾರೊಬ್ಬರೂ ಕೂಡ ಹಾವುಗಳನ್ನ ಸಾಯಿಸಬಾರದು. ಯಾಕಂದರೆ, ಅವುಗಳೂ ಕೂಡ ಮನುಷ್ಯ ಜೀವಿಯ ಒಂದು ಅವಿಭಾಜ್ಯ ಅಂಗವೆಂದು ನಾವೆಲ್ಲರೂ ಭಾವಿಸಬೇಕು. ಹಾವುಗಳ ಸಂತತಿ ಮುಂದಿನ ಪೀಳಿಗೆಗೂ ಉಳಿಯ ಬೇಕಿದೆ. ವಿಷಪೂರಿತ ಹಾವುಗಳು ಬಹಳ ನಿಧಾನಗತಿಯಲ್ಲಿ ಚಲಿಸುತ್ತವೆ. ವಿಷಪೂರಿತವಲ್ಲದ ಹಾವುಗಳು ಬಹಳ ವೇಗವಾಗಿ ಚಲಿಸುತ್ತವೆ. ವಿಷಪೂರಿತ ಹಾವುಗಳು ಕೇವಲ 6 ಪ್ರಭೇದಗಳು ಮಾತ್ರ ಇವೆ. ಈ ಕುರಿತು ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಕಾರ್ಯ ನನ್ನಿಂದ ಆಗುತ್ತಿದೆ ಎಂದು ಯುವ ವೈದ್ಯ ಅಶೋಕಕುಮಾರ್ ವಿವರಿಸಿದರು.