ಬಳ್ಳಾರಿ/ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಡಿ ಹಂಪಿ ಸ್ಮಾರಕ ಹಾಗೂ ಜೀರ್ಣೋದ್ಧಾರದ ಕೆಲಸದಲ್ಲಿದ್ದ 250 ದಿನಗೂಲಿ ಕಾರ್ಮಿಕರಿಗೆ ಮೂಲ ವೇತನ ಮತ್ತು ತುಟ್ಟಿ ಭತ್ಯೆ ಜೊತೆಗೆ ವೇತನ ಪಾವತಿ ಮಾಡಬೇಕು ಎಂದು ಕೇಂದ್ರ ಕಾರ್ಮಿಕ ನ್ಯಾಯಾಲಯ ತೀರ್ಪು ನೀಡಿದೆ.
ಈ ಹಿನ್ನೆಲೆ ಹರ್ಷ ವ್ಯಕ್ತಪಡಿಸಿರುವ ಕಮಲಾಪುರ ಪುರಾತತ್ವ ಕಾರ್ಮಿಕರ ಸಂಘದ ಅಧ್ಯಕ್ಷ ಎ.ಆರ್.ಎಂ.ಇಸ್ಮಾಯಿಲ್, ನಾಲ್ಕು ದಶಕಗಳಿಂದ ಹಂಪಿಯಲ್ಲಿ ಸ್ಮಾರಕ ಸಂರಕ್ಷಣೆ ಹಾಗೂ ಜೀರ್ಣೋದ್ಧಾರ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಆದೇಶ ತೃಪ್ತಿ ತಂದಿದೆ. ಕಮಲಾಪುರ ಯೋಜನೆಯ ಕಾರ್ಮಿಕರಿಗೆ ಅನ್ವಯಗೊಳಿಸಿ ವೇತನ ಪಾವತಿಸಬೇಕು ಎಂಬ ಬಹುದಿನಗಳ ಬೇಡಿಕೆಯನ್ನು ಪುರಸ್ಕರಿಸಿ, ಕೇಂದ್ರ ಕಾರ್ಮಿಕ ನ್ಯಾಯಾಲಯ ಈ ತೀರ್ಪು ನೀಡಿದೆ ಎಂದರು.
ಈ ತೀರ್ಪಿನ ಅನ್ವಯ ದಿನಾಂಕ 1998ರಿಂದ ಸತತ ಸೇವೆಯಲ್ಲಿರುವ ಎಲ್ಲಾ ಕಾರ್ಮಿಕರಿಗೆ ವೇತನ ಪಾವತಿ ಮಾಡದಿರುವುದು ನ್ಯಾಯ ಸಮ್ಮತವಲ್ಲ. ಇದು ಕಾನೂನು ಬಾಹಿರವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.