ಬಳ್ಳಾರಿ: ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದ ಪತ್ರಿಕಾ ಭವನದಲ್ಲಿ ಮಾತನಾಡಿದ ಕಾರ್ಮಿಕ ತಿಪ್ಪೆಸ್ವಾಮಿ, ಜಿಲ್ಲೆಗೆ ಇಎಸ್ಐಸಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ 2017ರಲ್ಲಿ ಮಂಜುರಾಗಿದೆ. ಆದರೆ ಆರಂಭವಾಗಿಲ್ಲ. ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಆಸ್ಪತ್ರೆಯಿಂದಾಗಿ ಇಎಸ್ಐಸಿ ಫಲಾನುಭವಿಗಳು ವೈದ್ಯಕೀಯ ಚಿಕಿತ್ಸೆಗಾಗಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಕಲಬುರಗಿ, ಬೆಂಗಳೂರಿಗೆ ಹೋಗಿ ಪರದಾಡುವಂತಾಗಿದೆ ಎಂದರು.
ಇಎಸ್ಐಸಿ ಸೇವೆ ಬಳ್ಳಾರಿಯಲ್ಲಿ ಇಲ್ಲ. ದಾವಣಗೆರೆ, ಬೆಂಗಳೂರಿನ ಸಂಜೀವಿನಿ ಆಸ್ಪತ್ರೆಗೆ ಹೋದಾಗ ಇಎಸ್ಐಸಿ ಅಡಿಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ನನ್ನ ಮಗ ಮರಣ ಹೊಂದಿದ. ನನಗೆ ಆದ ಅನ್ಯಾಯ ಬೇರೆ ಯಾವ ಕುಟುಂಬದ ಕಾರ್ಮಿಕರಿಗೂ ಆಗಬಾರದು ಎನ್ನುವ ಉದ್ದೇಶದಿಂದ ಈ ಮಾಹಿತಿ ತಿಳಿಸಲು ಬಂದಿದ್ದೇನೆ ಎಂದರು.
ಬಳ್ಳಾರಿಯಲ್ಲಿ ಸುಮಾರು 5 ಲಕ್ಷಕ್ಕಿಂತ ಅಧಿಕ ಕಾರ್ಮಿಕರು ಇರುವುದರಿಂದ ಇಎಸ್ಐಸಿ ಆಸ್ಪತ್ರೆ ನಿರ್ಮಾಣವಾದರೆ ಅನುಕೂಲವಾಗುತ್ತದೆ. ಆಸ್ಪತ್ರೆ ನಿರ್ಮಾಣಕ್ಕೆ 5 ಎಕರೆ ಜಮೀನಿನ ಅಗತ್ಯವಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಭೂಮಿ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.