ಬಳ್ಳಾರಿ: ಬಿಸ್ಕೆಟ್ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಿಸಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಸಲೀಂ ಮೃತರು. ಒಟ್ಟು ಐವರಿಗೆ ಗಾಯಗಳಾಗಿವೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಭರತ್ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: ಮಂಗಳೂರು: ಮದ್ಯ ಸೇವಿಸಿ ಹಿಂಸಿಸುತ್ತಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಂದ ಪತ್ನಿ
ಪ್ರತ್ಯೇಕ ಪ್ರಕರಣಗಳು:
ಕೊಪ್ಪಳದಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಮುಳುಗಿ ಸಾವು: ಗ್ರಾನೈಟ್ ಕ್ವಾರಿಯಲ್ಲಿನ ಹೊಂಡದಲ್ಲಿ ಸ್ನೇಹಿತರೊಂದಿಗೆ ಈಜಾಡಲು ಹೋಗಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗುದ್ನೇಪ್ಪನಮಠದ ಬಳಿ ಭಾನುವಾರ ಜರುಗಿದೆ. ಪ್ರದೀಪ್ (15) ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದು, ಮೃತ ಪ್ರದೀಪ್ ಅಲ್ಪಸಂಖ್ಯಾತ ಇಲಾಖೆಯ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ.
ನಿನ್ನೆ ಶಾಲೆಗೆ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆಯಲ್ಲಿ ಈ ದುರ್ಘಟನೆ ಜರುಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಮೃತನ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಪ್ರದೀಪ್ ಸಾವಿಗೆ ವಸತಿ ಶಾಲೆಯ ಸಿಬ್ಬಂದಿ ನಿರ್ಲಕ್ಷ್ಯತನವೇ ಕಾರಣ ಎಂದು ಪಾಲಕರು ಆರೋಪಿಸಿದ್ದು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.