ಬಳ್ಳಾರಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪೋಕ್ಸೋ ನ್ಯಾಯಾಲಯ ಸ್ಥಾಪಿಸಿದ್ರೂ ಕೂಡ ಲೈಂಗಿಕ ದೌರ್ಜನ್ಯಗಳ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಅರ್ಜುನ ಮಲ್ಲೂರ್ ಕಳವಳ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಎಸ್ಪಿ ವೃತ್ತದ ಬಳಿಯಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಸಭಾಂಗಣದಲ್ಲಿಂದು ರಾಷ್ಟ್ರೀಯ ಹೆಣ್ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಎಸ್.ಅರ್ಜುನ ಮಲ್ಲೂರ್ ಮಾತನಾಡಿದ್ರು.
ಹೆಣ್ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶೋಷಣೆಯಂಥ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆಯೇ ಹೊರತು, ಇಳಿಮುಖ ಕಾಣುತ್ತಿಲ್ಲ. ಮಕ್ಕಳ ಮೇಲಿನ ಮಾನಸಿಕ ಒತ್ತಡವೂ ಹೆಚ್ಚಾಗುತ್ತಿದೆ. ಅದಕ್ಕೆ ಬಹುಮುಖ್ಯ ಕಾರಣ ಜಾಗೃತಿಯ ಕೊರತೆ. ಇಂಥ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಪ್ರತ್ಯೇಕವಾದ ನ್ಯಾಯಾಲಯವನ್ನೂ ಕೂಡ ಸ್ಥಾಪಿಸಲಾಗಿದೆ. ಇಷ್ಟಿದ್ರೂ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ಅವರು ವಿಷಾದಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ ಮಾತನಾಡಿ, ಹೆಣ್ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಯ ಪ್ರಕರಣಗಳು ಗಣನೀಯವಾಗಿ ಕಮ್ಮಿಯಾಗಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ನಾನಾ ರೀತಿಯ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ರೂ ಆಧುನಿಕ ಸಮಾಜದಲ್ಲಿ ಹೆಣ್ಮಕ್ಕಳ ಮೇಲಿನ ಶೋಷಣೆ ಕಡಿಮೆಯಾಗುತ್ತಿಲ್ಲ ಅನ್ನೋದು ದುರಂತ. ಇನ್ನಾದ್ರೂ ಸಾರ್ವಜನಿಕರು ಹೆಣ್ಮಕ್ಕಳ ಮೇಲಿರುವ ತಾತ್ಸಾರ ಮನೋಭಾವವನ್ನು ಹೋಗಲಾಡಿಸಿ ಗೌರವದಿಂದ ಕಾಣಬೇಕೆಂದು ಮನವಿ ಮಾಡಿದರು.