ಬಳ್ಳಾರಿ: ಇಡೀ ದೇಶದಲ್ಲಿ ನಿಯತ್ತಿನ ಚುನಾವಣೆಗಳು ನಡಿಬೇಕು. ಒಳ್ಳೆಯ ಶಾಸಕರು, ಸಂಸದರು ಆಯ್ಕೆಯಾಗಬೇಕೆಂದು ಹರಪನಹಳ್ಳಿ ಶಾಸಕ ಗಾಲಿ ಕರುಣಾಕರ ರೆಡ್ಡಿ ಹೇಳಿದರು.
ಬಳ್ಳಾರಿಯ ಪಾರ್ವತಿ ನಗರದಲ್ಲಿರುವ ಬಸವ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದ ಮಂಗಳೂರು, ಉಡುಪಿ ಹಾಗೂ ಕಾರವಾರ ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಶಾಸಕರಾಗಿ ಆಯ್ಕೆಯಾಗಬಹುದು. ಆದರೆ, ಈ ಭಾಗದಲ್ಲಿ ಅತ್ಯಧಿಕ ಖರ್ಚಿನಿಂದ ಶಾಸಕರಾಗಿ ಆಯ್ಕೆಯಾಗಬೇಕಿದೆ ಎಂದರು.
ಆ ಭಾಗದ ಮತದಾರರು ಬಹಳ ಪ್ರಬುದ್ಧರಾಗಿದ್ದಾರೆ. ಅವರ ಒಕ್ಕಟ್ಟಿನ ಮಂತ್ರವೇ ಆ ಭಾಗದ ಶಾಸಕರು ಅತೀ ಕಡಿಮೆ ಖರ್ಚಿನಲ್ಲಿ ಆಯ್ಕೆಯಾಗುವ ಸೌಭಾಗ್ಯ ದೊರೆತಿದೆ. ಅದೇ ತರನಾದ ಬದಲಾವಣೆ ಇಡೀ ರಾಜ್ಯ ಸೇರಿದಂತೆ ದೇಶದಲ್ಲಾಗಬೇಕು. ಆಗ ಮಾತ್ರ ನಿಷ್ಟಾವಂತ ಜನಪ್ರತಿನಿಧಿಗಳು ಆಯ್ಕೆಯಾಗಿ ಬರಲು ಸಾಧ್ಯವಾಗುತ್ತೆ ಎಂದ್ರು.
ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಮೆಲುಗೈ ಸಾಧಿಸುವಂತಾಗಬೇಕು. ಅದಕ್ಕೆಲ್ಲಾ ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಮಂತ್ರ ಬಲಿಷ್ಠಗೊಳ್ಳಬೇಕು. ಸಣ್ಣ-ಪುಟ್ಟ ವೈಮನಸ್ಸುಗಳನ್ನು ಬಿಟ್ಟುಹಾಕಬೇಕೆಂದು ತಿಳಿಸಿದರು.