ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಬಳಿ ನೂತನವಾಗಿ ಪ್ರಾರಂಭವಾಗಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಇಬ್ಬರು ಅಪರೂಪದ ಅತಿಥಿಗಳ ಬಂದಿದ್ದಾರೆ. 7 ವರ್ಷದ ಅರ್ಜುನ್ ಎಂಬ ಹೆಸರಿನ ಒಂದು ಬಿಳಿ ಹುಲಿ ಮತ್ತು ಎಂಟು ಬಿಳಿ ತೋಳಗಳನ್ನು ಇತ್ತೀಚೆಗೆ ಮೈಸೂರಿನ ಮೃಗಾಲಯದಿಂದ ಇಲ್ಲಿಗೆ ಕರೆತರಲಾಗಿದೆ. ಹಾಗಾಗಿ ಹೊಸ ಅತಿಥಿಗಳ ಆಗಮನದಿಂದ ಪ್ರಾಣಿಪ್ರೀಯರಿಗೆ ಇದೀಗ ಖುಷಿ ತರಿಸಿದೆ.
ಉತ್ತರ ಕರ್ನಾಟಕ ಜನತೆ ಇನ್ನು ಮುಂದೆ ಬಿಳಿ ಹುಲಿಯನ್ನು ವೀಕ್ಷಣೆ ಮಾಡಲು ಮೈಸೂರು ಮೃಗಾಲಯಕ್ಕೆ ಹೋಗಬೇಕಿಲ್ಲ. ತಾಲೂಕಿನ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿಯೇ ಕಣ್ತುಂಬಿಕೊಳ್ಳಬಹುದಾಗಿದೆ.
ಸದ್ಯ ಮೃಗಾಲಯದಲ್ಲಿ ಪಟ್ಟೆ ಹುಲಿ, ಜಿರಾಫೆ, ಕಾಡುಕೋಣ, ಸಿಂಹ ಸೇರಿದಂತೆ ನಾನಾ ಪ್ರಾಣಿಗಳನ್ನು ಕಾಣಬಹುದಿತ್ತು. ಇದೀಗ ಸ್ಥಳೀಯ ಮಟ್ಟದಲ್ಲಿ ಇಂತಹ ಅಪರೂಪದ ಪ್ರಾಣಿಗಳನ್ನು ನೋಡುವ ಅವಕಾಶ ಪ್ರವಾಸಿಗರಿಗೆ ಲಭ್ಯವಾಗಿದ್ದರಿಂದ ಇಲ್ಲಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಿಳಿ ಹುಲಿ ಈ ಮುಂಚೆ ಮೈಸೂರು ಮೃಗಾಯಲದಲ್ಲಿತ್ತು. ಈಗ ಬಳ್ಳಾರಿ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿದೆ. ಕೆಲ ದಿನಗಳ ಕಾಲ ಹುಲಿಯ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು. ಈಗ ಹುಲಿ ನಿಧಾನಕ್ಕೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ ಎಂದು ವಾಜಪೇಯಿ ಪ್ರಾಣಿ ಮೃಗಾಲಯದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಕಮಲಾಪುರ ಹಾಗೂ ಬಿಂಕದಕಟ್ಟಿಯಲ್ಲಿ ಮೃಗಾಲಯವಿದೆ. ಆದರೆ, ಅಲ್ಲಿ ಬಿಳಿ ಹುಲಿಯ ಭಾಗ್ಯವಿಲ್ಲ. ಕೆಲ ಪ್ರಾಣಿಗಳನ್ನು ನೋಡಬಹುದಾಗಿದೆ. ರಾಜ್ಯದಲ್ಲಿ ಒಟ್ಟು 9 ಪ್ರಾಣಿ ಮೃಗಾಲಯಗಳಿವೆ. ಈ ಪೈಕಿ ಮೈಸೂರು ಮೃಗಾಲಯದಲ್ಲಿ ಮಾತ್ರ ಬಿಳಿ ಹುಲಿಯನ್ನು ಕಾಣಬಹುದಾಗಿತ್ತು. ಆದರೆ, ಕ್ರಾಸ್ ಬ್ರೀಡ್ ಮಾಡಿದ 7 ವರ್ಷದ ಗಂಡು ಬಿಳಿ ಹುಲಿಯನ್ನು ಇಲ್ಲಿನ ಪ್ರಾಣಿ ಮೃಗಾಲಯದಲ್ಲಿಯೂ ನೋಡಬಹುದು ಎಂದರು.
ಸೆ.1 ರಂದು ವೀಕ್ಷಣೆಗೆ ಅವಕಾಶ:
ಈಗ ಹುಲಿಯ ಮೇಲೆ ನಿಗಾ ವಹಿಸಲಾಗಿದೆ. ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶವನ್ನು ನೀಡಿಲ್ಲ. ಹುಲಿ ವಾತಾವರಣಕ್ಕೆ ಹೊಂದಿದ ನಂತರ ವೀಕ್ಷಣೆಗೆ ಬಗ್ಗೆ ಸ್ಪಷ್ಟಪಡಿಸುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಎಲ್ಲವೂ ಅಂದುಕೊಂಡಂತಾದರೆ ಇದೇ ಸೆ.1 ರಂದು ಪ್ರಾಣಿ ಪ್ರೀಯರಿಗೆ ನೋಡಲು ಅವಕಾಶ ಮಾಡಿಕೊಡುವುದಾಗಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.