ಬಳ್ಳಾರಿ : ಈ ಮೈತ್ರಿಕೂಟದ ಸರ್ಕಾರದಲ್ಲಿ ಭಿನ್ನಮತ ಎಲ್ಲಿದೆ? ಅದೆಲ್ಲಾ ಮಾಧ್ಯಮಗಳ ಸೃಷ್ಠಿಯಷ್ಟೇ. ನಿನ್ನೆಯ ದಿನವೂ ಕೂಡ ನನ್ನ ಭಾವಚಿತ್ರ ಮಾಧ್ಯಮಗಳಲ್ಲಿ ಬಿತ್ತರಿಸುವ ಮುಖೇನ ಭಿನ್ನಮತೀಯ ಶಾಸಕರ ಪಟ್ಟಿಗೆ ಸೇರಿಸಲಾಗಿದೆ. ಅದನ್ನ ಹೇಳಿದ್ದು ಯಾರು? ಯಾವ ಮೂಲಗಳಿಂದ ತಿಳಿದುಬಂದಿದೆ ಎಂಬುದನ್ನ ಸ್ಪಷ್ಟಪಡಿಸಿರಿ ಎಂದು ಶಾಸಕ ಭೀಮಾನಾಯ್ಕ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ನಗರದ ರಾಬಕೊ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ನಮ್ಮೊಳಗೆ ಭಿನ್ನಮತ ಇದೆ ಅಂತ ಹೇಳಿದ್ದು ಯಾರು ? ಮಾಧ್ಯಮದವರು ಸತ್ಯಾಸತ್ಯತೆಯನ್ನು ಅರಿತುಕೊಂಡು ಸುದ್ದಿ ಬಿತ್ತರಿಸಬೇಕು, ಕ್ಷೇತ್ರದ ಜನರು ನಿಮ್ಮ ಚಾನಲ್ ಹಾಗೂ ಪತ್ರಿಕೆಯನ್ನು ವೀಕ್ಷಣೆ ಮಾಡುತ್ತಾರೆ, ಇದನ್ನು ಅರಿತುಕೊಂಡು ಸುದ್ದಿಯನ್ನು ಬಿತ್ತರಿಸಬೇಕು ಸುಳ್ಳು ಸುದ್ದಿ ಮತ್ತು ಊಹಾಪೋಹದ ಸುದ್ದಿಯನ್ನು ಬಿತ್ತರಿಸಬಾರದು ಎಂದು ಮನವಿ ಮಾಡಿದರು.
ಸರ್ಕಾರ ಸುಭದ್ರ
ಇನ್ನೂ ಐದು ವರ್ಷಗಳ ಕಾಲ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ, ಸಿಎಂ ಆಗಿ ಕುಮಾರಸ್ವಾಮಿಯವರೇ ಮುಂದುವರೆಯುತ್ತಾರೆ, ಎಐಸಿಸಿ ನಾಯಕರ ತೀರ್ಮಾನವೇ ಅಂತಿಮ. ನಾನಂತೂ ಭಿನ್ನಮತೀಯರ ಚುಟುವಟಿಕೆಗಳಲಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ, ಅದ್ರೆ ಹಿರಿತನ ಪರಿಗಣಿಸಿ ಪಿ.ಟಿ ಪರಮೇಶ್ವರ ನಾಯ್ಕ್ ಅವರಿಗೆ ಸಚಿವ ಸ್ಥಾನ ನೀಡಿದ್ರು, ಅದರ ಬಗ್ಗೆ ನನಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ದೇಶದ ಜನ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ, ಅವರ ಮೇಲೆ ಇಷ್ಟೊಂದು ಪ್ರೀತಿ ಯಾಕೆ ಅಂತಾನೆ ಗೊತ್ತಿಲ್ಲ, ಕೇವಲ ನನ್ನ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಲೀಡ್ ಕಡಿಮೆಯಾಗಿಲ್ಲ. ಮೋದಿಯವರು ಭಾವನಾತ್ಮಕವಾಗಿ ವಿಚಾರ ಪ್ರಸ್ತಾಪಿಸಿದ್ದರಿಂದ ದೇಶದ ಮತದಾರರು ಅವರನ್ನು ಬೆಂಬಲಿಸಿದ್ದಾರೆ. ಇಡೀ ದೇಶವೇ ಮೋದಿಯ ಗುಣಗಾನ ಮಾಡುತ್ತೆ, ಅದ್ರೆ ಮೋದಿಯವರ ಈ 5 ವರ್ಷದ ಸಾಧನೆ ಏನು? ಜಿಲ್ಲೆಗೆ ಮೋದಿಯವರ ಕೊಡುಗೆ ಎನು? ನನಗಂತೂ ಮೋದಿ ಇಷ್ಟ ಆಗಲಿಲ್ಲ ಎಂದರು.
ಅವಿರೋಧ ಆಯ್ಕೆ
ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಹಗರಿಬೊಮ್ಮನಹಳ್ಳಿಯ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇ ಅರಳಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಶಿವಪ್ಪ ವಾದಿ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಒಕ್ಕೂಟದ ಹನ್ನೆರಡು ಮಂದಿಯ ಒಮ್ಮತದ ಅಭಿಪ್ರಾಯದ ಮೇರೆಗೆ ಈ ಪ್ರಕ್ರಿಯೆ ನಡೆಸಲಾಗಿದೆ. ಮೂರೂ ಜಿಲ್ಲೆಗಳಿಗೆ ತಲಾ 20 ತಿಂಗಳ ಕಾಲ ಅಧಿಕಾರದ ಅವಧಿಯನ್ನು ಹಂಚಿಕೆ ಮಾಡಲಾಗಿದೆ. ಮೊದಲಿಗೆ ಬಳ್ಳಾರಿ ಜಿಲ್ಲೆಯ ಅಧ್ಯಕ್ಷರಾಗಿ ಶಾಸಕ ಭೀಮಾನಾಯ್ಕ ಆಯ್ಕೆಯಾಗಿದ್ದಾರೆ. ಎರಡು ಮತ್ತು ಮೂರನೇ ಅವಧಿಗೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ನಿರ್ದೇಶಕರನ್ನು ಒಕ್ಕೂಟದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ.
ಅಂದಾಜು 108 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಈ ಮೆಗಾ ಡೈರಿ ನಿರ್ಮಾಣ ಕಾರ್ಯಕ್ಕೆ ಅಗತ್ಯ ಜಾಗದ ಅವಶ್ಯಕತೆಯಿದೆ. ಬಳ್ಳಾರಿಯ ವಿಎಸ್ ಕೆ ವಿವಿಯ ಪಕ್ಕದಲ್ಲೇ ಸರ್ಕಾರಿ ಜಾಗೆ ನೀಡುವಂತೆ ಜಿಲ್ಲಾಡಳಿತದ ಗಮನ ಸೆಳೆಯಲಾಗಿದೆ. ಸರ್ಕಾರಿ ಜಾಗ ಇರದ ಕಾರಣ ಖಾಸಗಿ ಜಾಗ ಖರೀದಿಸಲು ನಿರ್ಧರಿಸಲಾಗಿದೆ. ಸಂಡೂರು ಭಾಗದಲ್ಲೂ ಕೆಎಂಸಿವೈ ಘಟಕ ಹಾಗೂ ಹಾಲು ಉತ್ಪಾದಕರ ಮಹಿಳಾ ಸಂಘಗಳ ಉದ್ಘಾಟನೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಭೀಮಾನಾಯ್ಕ ಹೇಳಿದರು.