ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿ ಎಂದರೆ ಶ್ರೀಮಂತ ಜಿಲ್ಲೆಯಂತಾಗಿತ್ತು. ಹೊರಗಡೆ ನೋಡೋ ದೃಷ್ಠಿಕೋನವೇ ಬೇರೆಯಾಗಿತ್ತು. ಆದರೀಗ ಮೂರೊತ್ತಿನ ಊಟಕ್ಕೂ ಇಲ್ಲದ ಹಾಗೆ ಆಗಿದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರ ಸಭಾಂಗಣದಲ್ಲಿಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿ, ನಾವು ಒಂದು ಕಾಲದಲ್ಲಿ ಬಡತನದಲ್ಲಿದ್ದೆವು. ಆದರೀಗ ಸ್ವಲ್ಪ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದೇವೆ. ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಅವಕಾಶ ಇರಲಿಲ್ಲ. ಈಗ ಆ ಅವಕಾಶ ದೊರೆತಿದೆ. ಹಾಗಂತ, ಶ್ರೀಮಂತರೆಂದರೆ ಹೇಗೆ. ಇಂತಹ ವಕ್ರದೃಷ್ಠಿಯಿಂದಲೇ ಈ ದಿನ ನಮಗೆ ಮುರೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಕುರಿತು ಗಂಭೀರ ಚಿಂತನೆ ನಡೆಯಬೇಕು. ಅದರೊಂದಿಗೆ ಕೃಷಿ ಚಟುವಟಿಕೆಗೂ ಆದ್ಯತೆ ನೀಡಬೇಕು. ಕೈಗಾರಿಕಾ ಕಂಪನಿಗಳ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ರೈತರ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಆ ಕುರಿತು ಚಿಂತನೆಯಾಗಬೇಕು ಎಂದು ಅಗ್ರಹ ಮಾಡಿದರು.