ಬಳ್ಳಾರಿ: ನಮ್ಮ ಪಕ್ಷದಲ್ಲಿದ್ದಾಗ ಅಧಿಕಾರ ಅನುಭವಿಸಿದವರೇ ಇವತ್ತು ಪಕ್ಷ ತ್ಯಜಿಸಲು ಮುಂದಾದ್ರೆ ಪರ್ಯಾಯ ನಾಯಕತ್ವ ಸೃಷ್ಠಿಯೇ ನಮ್ಮ ಮುಂದಿರುವ ಆಯ್ಕೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ವಿರುದ್ಧವಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಪಕ್ಷದ ಗೌರವಕ್ಕೆ ಧಕ್ಕೆಯುಂಟು ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಪರ್ಯಾಯ ನಾಯಕತ್ವ ಸೃಷ್ಠಿಸಲು ಜೆಡಿಎಸ್ ಪಕ್ಷ ಯಾವತ್ತಿಗೂ ಸನ್ನದ್ಧವಾಗಿರುತ್ತದೆ. ಪಕ್ಷದ ಶಾಸಕರು ಪಕ್ಷ ತೊರೆದು ಹೋಗುತ್ತಾರೆ ಎಂಬ ವಿಚಾರ ಕಪೋಲಕಲ್ಪಿತವಾದದ್ದು. ಯಾರೂ ಪಕ್ಷ ಬಿಟ್ಟು ಹೋಗುತ್ತಿಲ್ಲ. ಭಿನ್ನಾಭಿಪ್ರಾಯ ಇರುವುದು ನಿಜ ಎಂದರು.
ರಾಜ್ಯವನ್ನು ರಾಜಕೀಯ ಅಸ್ಥಿರತೆ ಕಾಡುತ್ತಿದೆ. ಸರ್ಕಾರ ಕೇವಲ ವರ್ಗಾವಣೆ ವಿಚಾರದಲ್ಲಿ ಮಾತ್ರ ಮುಂದಿದೆ. ಅಧಿಕಾರಿಗಳು ಸರ್ಕಾರಕ್ಕೆ ದಾಸನಾಗಬೇಕು. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಕೊಡಿ, ಅಮಾನತು ಮಾಡಿ. ಆದರೆ, ತಿಂಗಳಲ್ಲಿ ಸಾವಿರಾರು ವರ್ಗಾವಣೆ ಯಾಕೆ? ಸರ್ಕಾರ ವಿರೋಧ ಪಕ್ಷಗಳಿಗೆ ಉತ್ತರಿಸದಿದ್ದರೂ ಜನರಿಗೆ ಉತ್ತರ ಕೊಡಲೇಬೇಕು. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದರೆ ಸಾಲದು, ನಿಜವಾಗಿ ಅಭಿವೃದ್ದಿಯಾಗಬೇಕಿದೆ ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಹೆಚ್.ಕೆ ಕುಮಾರಸ್ವಾಮಿ ಕಿಡಿ ಕಾರಿದ್ರು.