ಬಳ್ಳಾರಿ: ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರನ್ನ ಉಪಮುಖ್ಯಮಂತ್ರಿ ಮಾಡಿ ಎಂದು ಕೇಳಿ ಕೊಳ್ಳುತ್ತೇವೆಯೇ ಹೊರತು ಆ ವಿಚಾರವಾಗಿ ಗುಂಪುಗಾರಿಕೆ ಮಾಡೋಲ್ಲ ಎಂದು ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ತಿಳಿಸಿದ್ದಾರೆ.
ನಗರದ ಸರ್ಕಾರಿ ಅತಿಥಿ ಗೃಹದ ಹಿಂಭಾಗದಲ್ಲಿರುವ ಸರ್ಕಾರಿ ನೌಕರರ ವಸತಿ ಗೃಹಗಳ ನಿರ್ಮಾಣ ಕಾರ್ಯಕ್ಕೆ ಶಾಸಕರು ಭೂಮಿ ಪೂಜೆ ಸಲ್ಲಿಸಿ ತೆಂಗಿನಕಾಯಿ ಹೊಡೆದ ಗುದ್ಲಿಯಿಂದ ಐದು ಬಾರಿ ನೆಲಕ್ಕೆ ತಿವಿಯೋ ಮುಖೇನ ಚಾಲನೆ ನೀಡಿದ್ರು. ನಂತರ ಮಾತನಾಡಿದ ಅವರು, ಅಂದಾಜು 15 ಕೋಟಿ ರೂ.ಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಈ ವಸತಿ ಗೃಹ ನಿರ್ಮಾಣ ಕಾರ್ಯ ನಡೆಯಲಿದೆ. ಎರಡು ಕಡೆ ಅಪಾರ್ಟ್ಮೆಂಟ್ ನಿರ್ಮಾಣ ಆಗಲಿದೆ ಎಂದರು.

ಶಾಸಕ ಬಸವರಾಜ ಪಾಟೀಲ್ ಯತ್ನಾಳ ಅವರ ನೇತೃತ್ವದಲ್ಲಿ ಸಚಿವ ಶ್ರೀರಾಮುಲು ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂಬ ವಿಚಾರ ಇಟ್ಟುಕೊಂಡು ಗುಂಪುಗಾರಿಕೆ ಮಾಡುತ್ತಿದ್ದೀರಿ ಅಂತಾರಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ನಾವಂತೂ ಗುಂಪುಗಾರಿಕೆ ನಡೆಸಿಲ್ಲ. ಆದರೆ, ಎಸ್ ಟಿ ಸಮುದಾಯದ ಪ್ರಬಲ ನಾಯಕರಾದ ಸಚಿವ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕೆಂಬ ವಿಚಾರವನ್ನ ಪ್ರಸ್ತಾಪಿಸಲು ನಿರ್ಧರಿಸಿದ್ದೇವೆ ಹೊರತು, ಗುಂಪುಗಾರಿಕೆ ಮಾತ್ರ ನಡೆಸಿಲ್ಲ. ಅದು ನಮ್ಮ ಸಂಸ್ಕೃತಿಯಲ್ಲ ಎಂದರು.

ಈ ಬಾರಿಯ ಸಚಿವ ಸಂಪುಟದ ವಿಸ್ತರಣೆಯಲ್ಲಿ ತಮಗೂ ಕೂಡ ಸಚಿವ ಸ್ಥಾನ ಸಿಗಬಹುದಾ? ಎಂಬ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಾನಂತೂ ಆಕಾಂಕ್ಷಿಯಲ್ಲ. ಆ ಭಗವಂತನ ಕೃಪೆ ಮತ್ತು ಆರ್ಶೀವಾದ ಇದ್ದರೆ ನನಗೆ ಸಚಿವ ಸ್ಥಾನ ಸಿಗುತ್ತೆ ಎಂದರು.