ಬಳ್ಳಾರಿ: ಕೇಂದ್ರ ಸರ್ಕಾರದ ಸ್ವಯಂಘೋಷಿತ ನಿವೃತ್ತಿ ಯೋಜನೆಯಡಿ ಜಿಲ್ಲಾದ್ಯಂತ ಸುಮಾರು 300 ಬಿಎಸ್ಎನ್ಎಲ್ ನೌಕರರ ಪೈಕಿ ಅಂದಾಜು 177 ಮಂದಿ ನೌಕರರು ಸ್ವಯಂ ಘೋಷಿತ ನಿವೃತ್ತಿಗೆ ಅರ್ಜಿಸಲ್ಲಿಸಿದ್ದು, ಈ ತಿಂಗಳಾಂತ್ಯಕ್ಕೆ ನಿವೃತ್ತಿ ಪಡೆಯಲಿದ್ದಾರೆ.
ಭಾರತ ಸಂಚಾರ ನಿಗಮ (ಬಿಎಸ್ಎನ್ಎಲ್) ಬಳ್ಳಾರಿ ಉಪ ವಿಭಾಗದ ಕಚೇರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಎಜಿಎಂ, ಡಿಜಿಎಂ, ಎಸ್ ಡಿಎ ಹಾಗೂ ಜೆಟಿಒ ಸೇರಿದಂತೆ ಉನ್ನತ ವಲಯದ ಹುದ್ದೆಗಳಿದ್ದ ನೌಕರರೆಲ್ಲರೂ ಕೂಡ ಜನವರಿ 31ಕ್ಕೆ ತಮ್ಮ ಸೇವಾವಧಿ ಕೊನೆಗಾಣಿಸಲು ಸ್ವಯಂಪ್ರೇರಣೆಯಿಂದ ಮುಂದಾಗಿದ್ದಾರೆ. ಜಿಲ್ಲೆಯ ಆಯಾ ತಾಲೂಕಿನ ಬಿಎಸ್ಎನ್ಎಲ್ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂದಾಜು 12 ಪ್ರಮುಖ ಹುದ್ದೆಗಳಲ್ಲಿರುವವರೂ ಕೂಡ ಇದರಲ್ಲಿದ್ದಾರೆ. 123 ನೌಕರರು ಮಾತ್ರ ಜಿಲ್ಲೆಯ ಬಿಎಸ್ಎನ್ಎಲ್ ಕಚೇರಿಗಳಲ್ಲಿ ಉಳಿದುಕೊಳ್ಳಲಿದ್ದಾರೆ.
2019ರ ವಿಆರ್ಎಸ್ ವಿಶೇಷ ಪ್ಯಾಕೇಜ್ ಯೋಜನೆಯಡಿ ಕೇಂದ್ರ ಸರ್ಕಾರ ಸ್ವಯಂಘೋಷಿತ ನಿವೃತ್ತಿಯ ಅವಕಾಶ ನೀಡಿದ್ದು, ಅಂದಾಜು ಶೇಕಡಾ 125ರಷ್ಟು ಪಿಂಚಣಿ ಹೆಚ್ಚಳಕ್ಕೆ ಅವಕಾಶ ಕಲ್ಪಿಸಿದೆ. ಆ ಸೌಲಭ್ಯದ ಅಡಿ ನಾವೆಲ್ಲರೂ ಸ್ವಯಂ ಘೋಷಿತ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಎಜಿಎಂಗಳಾದ ಕೆ.ವಿಶ್ವಪ್ರಕಾಶ, ದಾದಾ ಕಲಂದರ್, ವಿರೂಪಾಕ್ಷ ಮೌಖಿಕವಾಗಿ ತಿಳಿಸಿದ್ದಾರೆ. ಲೆಫ್ಟ್ ಓವರ್ - ಸರ್ವೀಸ್ ಓವರ್ ಪ್ಯಾಕೇಜ್ ಅಡಿ ಸ್ವಯಂ ಘೋಷಿತ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು, ಎರಡು ವರ್ಷದ ಅವಧಿಯವರೆಗೆ ಯಾವುದೇ ವಲಯದಲ್ಲಿ ಕರ್ತವ್ಯ ನಿರ್ವಹಿಸದಿರುವ ಕುರಿತಾದ ಒಪ್ಪಂದಕ್ಕೆ ನಾವೆಲ್ಲರೂ ಸಹಿ ಹಾಕಿದ್ದೇವೆ. ಇಷ್ಟು ವರ್ಷಗಳ ಕಾಲ ಸೇವೆ ಮಾಡಿದ ನಮಗೆಲ್ಲರಿಗೂ ಉತ್ತಮ ಮೊತ್ತದ ವೇತನ ನೀಡಿ ವಿಆರ್ಎಸ್ ಪಡೆಯುತ್ತಿರೋದು ನಮಗೆಲ್ಲ ಖುಷಿ ತಂದಿದೆ ಎಂದರು. 50 ರಿಂದ 60 ವರ್ಷದ ವಯೋಮಾನದವರಿಗೂ ಕೂಡ ಒಂದೇ ರೀತಿಯ ವೇತನವನ್ನು ಕೊಡುವ ಮುಖೇನ ತಾರತಮ್ಯ ನೀತಿಯನ್ನು ಹೋಗಲಾಡಿಸಲು ಬಿಎಸ್ಎನ್ಎಲ್ ಕೇಂದ್ರ ಕಚೇರಿಯ ಅಧಿಕಾರಿಗಳು ಶ್ರಮಿಸಿದ್ದಾರೆ. ಅವರಿಗೆ ನಾವೆಂದಿಗೂ ಅಭಾರಿಯಾಗಿದ್ದೇವೆ ಎಂದು ಹೇಳಿದರು.
ಬಳ್ಳಾರಿ- 82, ಕುರುಗೋಡು- 6, ತೋರಣಗಲ್ಲು - 4, ಸಿರುಗುಪ್ಪ- 7, ಸಂಡೂರು - 5, ಹೊಸಪೇಟೆ- 40, ಹಗರಿಬೊಮ್ಮನಹಳ್ಳಿ- 5, ಹರಪನಹಳ್ಳಿ- 11, ಹೂವಿನಹಡಗಲಿ- 9, ಕೂಡ್ಲಿಗಿ - 6 ಹಾಗೂ ಮೊಬೈಲ್ ಸರ್ವೀಸ್ನ ಇಬ್ಬರು ನೌಕರರು ಈ ಸ್ವಯಂ ಘೋಷಿತ ನಿವೃತ್ತಿಗೆ ಅರ್ಜಿಸಲ್ಲಿಸಿದ್ದು, ಅವರ ನಿವೃತ್ತಿಗೆ ಕೇವಲ ಮೂರು ದಿನಗಳು ಮಾತ್ರ ಬಾಕಿಯಿದೆ.