ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿರುವ ಶವಗಾರದ ಕೋಲ್ಡ್ ಸ್ಟೋರೇಜ್ ಶವಪೆಟ್ಟಿಗೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಕೊರೊನಾ ಪರೀಕ್ಷೆ ಸಲವಾಗಿ ಶವಾಗಾರಕ್ಕೆ ತಂದಿದ್ದ ಮೃತದೇಹಗಳನ್ನು ಎಲ್ಲೆಂದರಲ್ಲಿ ಇಟ್ಟಿರುವ ದೃಶ್ಯಗಳು ಕಂಡು ಬಂದವು.
ವಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಶವ ಇಡುವ ಕೋಲ್ಡ್ ಸ್ಟೋರೇಜ್ ದುರಸ್ತಿಗೆ ಬಂದ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಇಡಲಾಗಿದೆ. ಆಸ್ಪತ್ರೆಯಲ್ಲಿ ಮೃತರಾದ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಪರೀಕ್ಷಾ ವರದಿ ಬರುವವರೆಗೂ ಶವ ಹಸ್ತಾಂತರಿಸಲು ನಿರಾಕರಣೆ ಮಾಡಲಾಗಿದೆ. ಹೀಗಾಗಿ ಎಲ್ಲಿ ಬೇಕೆಂದರಲ್ಲಿ ಇಟ್ಟಿರುವ ಮೃತದೇಹದ ಜೊತೆಯಲ್ಲೇ ಕುಟುಂಬಸ್ಥರು ಕಾಲ ಕಳೆಯುತ್ತಿದ್ದು, ಅವರಿಗೂ ಸೋಂಕು ತಗುಲುತ್ತದೆಯೋ ಎಂಬ ಆತಂಕ ಮೂಡಿದೆ. ಇಲ್ಲಿ ಒಟ್ಟು 10 ಶವಾಗಾರದಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ.
ಕುಂಟುಂಬಸ್ಥರು ಬಯಸಿದರೆ ಖಾಸಗಿ ಕೋಲ್ಡ್ ಸ್ಟೋರೇಜ್ನಲ್ಲಿ ಶವ ಇಡಲು ವ್ಯವಸ್ಥೆ ಮಾಡಬಹುದು. ಆದರೆ, ಅಧಿಕ ಹಣ ಅಂದರೆ 2,500 ರೂ. ಹಣ ಪಾವತಿ ಮಾಡಬೇಕಾಗುತ್ತದೆ. ಇಲ್ಲಿಗೆ ಬರುವವರೂ ಬಹುತೇಕರು ಬಡವರಾಗಿದ್ದು, ಅಷ್ಟು ದುಡ್ಡು ಕಟ್ಟಲು ಅವರಿಂದ ಸಾಧ್ಯವಾಗದು.
ಆಸ್ಪತ್ರೆ ಶವಾಗಾರದಲ್ಲಿ ಮೃತದೇಹವನ್ನಿಟ್ಟುಕೊಂಡು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮೂರರಿಂದ ನಾಲ್ಕು ದಿನಗಳ ಕಾಲ ಮೃತದೇಹವನ್ನು ಇಟ್ಟಕೊಂಡರೆ ಶವ ಸಂಸ್ಕಾರ ಮಾಡುವುದು ಹೇಗೆ ಎಂದು ಮೃತರ ಸಂಬಂಧಿ ಭೀಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.