ಹೊಸಪೇಟೆ : ನವದೆಹಲಿಯಲ್ಲಿ ಆಚರಿಸುವ ಗಣರಾಜ್ಯೋತ್ಸವ ಸಂದರ್ಭ ಹಂಪಿಯ ಸ್ಮಾರಕಗಳು ಸ್ತಬ್ಧ ಚಿತ್ರಗಳಾಗಿ ಆಯ್ಕೆಯಾಗಿವೆ. ಇದು ಹೆಮ್ಮೆಯ ಸಂಗತಿಯಾಗಿದೆ. ಇದು ವಿಜಯನಗರ ಭಾಗದ ಜನರಿಗೆ ಸಂತೋಷ ತರಿಸಿದೆ ಎಂದು ಪ್ರವಾಸೋದ್ಯಮ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ನಗರದ ಪ್ರವಾಸ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಂಪಿ ರಾಜ್ಯಮಟ್ಟದಲ್ಲಿ ಅಲ್ಲ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಇದನ್ನು ಸ್ತಬ್ಧ ಚಿತ್ರಗಳ ಮೂಲಕ ಬೆಳಕು ಚೆಲ್ಲಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸ್ಕೂಟಿನಿ ನಡೆಯುತ್ತಿದೆ, ಆದಷ್ಟು ಬೇಗ ವಿಜಯನಗರ ಹೊಸ ಜಿಲ್ಲೆಯಾಗಿ ಘೋಷಣೆಯಾಗಲಿದೆ. ಪರ, ವಿರೋಧ ಪತ್ರಗಳನ್ನು ಪರಿಶೀಲಿಸಬೇಕಾಗಿದೆ ಎಂದು ವಿಜಯನಗರ ಜಿಲ್ಲೆಯ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯಲ್ಲಿ ಪ್ರವಾಸೋದ್ಯಮ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಾಹನವನ್ನು ಚಲಾಯಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ, ಪಕ್ಷದ ರಾಷ್ಟ್ರ ನಾಯಕಿ ಪುರಂದರೇಶ್ವರಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ವಾಹನದಲ್ಲಿ ಸಚಿವರೇ ಕರೆತಂದರು.
ನಗರದ ಪ್ರವಾಸ ಮಂದಿರದಿಂದ ಪ್ರಾರಂಭವಾದ ಬೈಕ್ ರ‍್ಯಾಲಿ ವಿಜಯನಗರ ಕಾಲೇಜ್, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ ಮೂಲಕ ಪ್ರಿಯದರ್ಶಿನಿ ಹೋಟೆಲ್ ಬಳಿಗೆ ತಲುಪಿತು. ಬೈಕ್ ರ್ಯಾಲಿಯಲ್ಲಿ 100ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ:ಹೆಚ್ ವಿಶ್ವನಾಥ್ ಯಾರಿಗೂ ಲೀಡರ್ ಅಲ್ಲ, ಎಲ್ಲಾ ಅವರಷ್ಟಕ್ಕೆ ಅವರೇ ಲೀಡರ್: ಬಿ.ಸಿ. ಪಾಟೀಲ್