ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವವು ನಾಳೆ ಬೆಳಗ್ಗೆ 11ಕ್ಕೆ ವಿವಿ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ವಿವಿ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರು ತಿಳಿಸಿದರು.
ವಿವಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘಟಿಕೋತ್ಸವದ ಕುರಿತು ಮಾತನಾಡಿದ ಅವರು, 8ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವ, ವಿವಿ ಸಮಕುಲಾಧಿಪತಿ ಡಾ. ಅಶ್ವತ್ಥನಾರಾಯಣ ವಹಿಸಲಿದ್ದು, ಘಟಿಕೋತ್ಸವ ಭಾಷಣವನ್ನು ನವದೆಹಲಿಯ ವಿವಿ ಅನುದಾನ ಆಯೋಗದ ಕಾರ್ಯದರ್ಶಿ ಸಿ.ವಿ.ಓ. ಪ್ರೊ. ರಜನೀಶ್ ಜೈನ್ ಆನ್ಲೈನ್ ಮೂಲಕ ಮಾಡಲಿದ್ದಾರೆ ಎಂದರು.
ಓದಿ: ಪ್ರಜಾ ವಿರೋಧಿ ಕಾಯ್ದೆ ತಂದ ಅರಸನ ಸಿಂಹಾಸನಕ್ಕೆ ಕಂಟಕ ಎಂದಿದ್ದೆ - ಕೋಡಿಮಠದ ಸ್ವಾಮೀಜಿ
ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 52 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. ವಿವಿಧ ವಿಭಾಗಗಳ 43 ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಹಾಗೂ ಒಟ್ಟು 40 ವಿದ್ಯಾರ್ಥಿಗಳು ರ್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೌರವ ಡಾಕ್ಟರೇಟ್:
ಇದೇ ವೇಳೆ ಮಂತ್ರಾಲಯದ ವಿದ್ವಾನ್ ರಾಜಾ ಎಸ್. ಗಿರಿ ಆಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ನೀಡಲಾಗುತ್ತಿದೆ. ಮೊದಲ ಬಾರಿಗೆ ವಿವಿ ಆವರಣದಲ್ಲಿ ಘಟಿಕೋತ್ಸವ ಆಚರಣೆ ಮಾಡಲಾಗುತ್ತಿದ್ದು, ಕೋವಿಡ್ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಲಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಯ ಕುಲಸಚಿವೆ ಪ್ರೊ. ತುಳಸಿಮಾಲ, ಮೌಲ್ಯಮಾಪನ ಕುಲಸಚಿವ ಶಶಿಕಾಂತ್ ಎಸ್. ಉಡಿಕೇರಿ ಇದ್ದರು.