ಹೊಸಪೇಟೆ: ಸರ್ಕಾರದ ಆದೇಶವನ್ನು ಉಲ್ಲಂಘಿಸಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಶುಲ್ಕ ಹೆಚ್ಚಳ ಮಾಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ವಿವಿ ವಿದ್ಯಾರ್ಥಿಗಳಿಗೆ ಗಾಯದ ಮೇಲೆ ಬರೆ ಎಳೆದಿದೆ.
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಶುಲ್ಕವನ್ನು ಹೆಚ್ಚಳ ಮಾಡಬಾರದು ಎಂದು ಸ್ಪಷ್ಟವಾಗಿ ಆದೇಶದ ಮೂಲಕ ತಿಳಿಸಿದೆ. ಆದರೆ, ವಿವಿಯು ಸ್ನಾತಕೋತ್ತರ ಪದವಿಗೆ ದಾಖಲಾತಿಗೆ ಕಳೆದ ವರ್ಷಕ್ಕಿಂತ 1,475 ರೂ. ಹೆಚ್ಚಳ ಮಾಡಿದೆ. ಇದು ಓಬಿಸಿ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈಗಾಗಲೇ ವಿವಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಎಂಎ ಪ್ರಥಮ ವರ್ಷ ಹಾಗೂ ದ್ವಿತೀಯ ವರ್ಷದ ಕನ್ನಡ, ಇಂಗ್ಲಿಷ್, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಎಂಎಸ್ಸಿ, ಎಂಕಾಂ, ಇತ್ಯಾದಿ ಕೋರ್ಸ್ಗಳಿಗೆ ಪ್ರವೇಶ ಹಾಗೂ ದಾಖಲಾತಿಯನ್ನು ಪ್ರಾರಂಭ ಮಾಡಿದೆ.
ಈಟಿವಿ ಭಾರತದೊಂದಿಗೆ ಎಸ್ಎಫ್ಐನ ತಾಲೂಕು ಅಧ್ಯಕ್ಷ ಶಿವುಕುಮಾರ ಅವರು ಮಾತನಾಡಿ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಳೆದ ವರ್ಷ 2,025 ರೂ. ಶುಲ್ಕ ನಿಗದಿ ಮಾಡಿತ್ತು. ಈ ಬಾರಿ 1,475 ರೂ. ಹೆಚ್ಚಳ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ವಿಜಯನಗರ ಶ್ರಿಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಅಲಗೂರ ಅವರು ಮಾತನಾಡಿ, ಶುಲ್ಕವನ್ನು ಹೆಚ್ಚಳ ಮಾಡಿಲ್ಲ. ಹಿಂದಿನ ವರ್ಷದ ಶುಲ್ಕವನ್ನೇ ಪಡೆಯಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.