ಬಳ್ಳಾರಿ: ಜಿಲ್ಲೆಯ ಶಾದಿಮಹಲ್ ಸಭಾಂಗಣದಲ್ಲಿಂದು ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಚೇತನರು, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರ ಉದ್ಘಾಟನಾ ಭಾಷಣ ಆರಂಭಕ್ಕೂ ಮುನ್ನವೇ ಕೆಲ ವಿಶೇಷ ಚೇತನರು ವೇದಿಕೆಯ ಮುಂಭಾಗಕ್ಕೆ ಆಗಮಿಸಿ ವಾಗ್ವಾದ ನಡೆಸಿದ್ರು.
ವಿಶ್ವ ವಿಶೇಷ ಚೇತನರ ದಿನಾಚರಣೆ ಎಂದು ಹೇಳುತ್ತೀರಿ. ಅದರೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ, ಜಿಲ್ಲಾಧಿಕಾರಿಯಾಗಲಿ ಭಾಗವಹಿಸಿಲ್ಲ. ನಮ್ಮ ನೋವು-ನಲಿವುಗಳಿಗೆ ಸ್ಪಂದಿಸಬೇಕಾದವರೇ ದಿನಾಚರಣೆಗೆ ಬರಲಿಲ್ಲವೆಂದರೆ ಹೇಗೆ? ಪ್ರತೀ ಬಾರಿ ಇದೇ ರೀತಿಯಾಗುತ್ತದೆ. ನಮ್ಮ ಮೇಲೆ ಯಾಕಿಷ್ಟು ತಾತ್ಸಾರ ಮನೋಭಾವ ಎಂದು ಪ್ರಶ್ನಿಸಿದರು.
ಈ ಸಂದರ್ಭ ವೇದಿಕೆ ಮೇಲೆ ಕುಳಿತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ ಪ್ರತಿಕ್ರಿಯಿಸಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಜನಪ್ರತಿನಿಧಿಗಳು ಬರುವಂತಿಲ್ಲ ಎಂದರು.
ಅಷ್ಟಕ್ಕೆ ಸುಮ್ಮನಾಗದ ವಿಶೇಷ ಚೇತನರು ಮೊನ್ನೆ ನಡೆದ ಕನಕದಾಸರ ಜಯಂತಿಗೆ ಚುನಾವಣೆ ನೀತಿ ಸಂಹಿತೆ ಅನ್ವಯಿಸಲಿಲ್ವಾ ಅಂತ ಪ್ರಶ್ನಿಸಿದರು.
ಬಳಿಕ ಮಾತನಾಡಿದ ಎಡಿಸಿ ಮಂಜುನಾಥ, ನಿಮ್ಮ ಸಮಸ್ಯೆ ಏನಿದ್ದರೂ ಬಗೆಹರಿಸಲು ನಾನಿದ್ದೇನೆ. ಸಮಾಧಾನದಿಂದ ವರ್ತಿಸಿ. ಅದು ಬಿಟ್ಟು ಈ ರೀತಿಯ ವರ್ತನೆ ತರವಲ್ಲ. ಮೊನ್ನೆ ನಡೆದ ಕನಕದಾಸರ ಜಯಂತಿಗೂ ಕೂಡ ಕೇವಲ ನೂರು ಮಂದಿಯನ್ನಷ್ಟೇ ಸೇರಿಸಿದ್ದೇವೆ. ಕೋವಿಡ್ ನಂತರ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.