ಹೊಸಪೇಟೆ: ಅನುಮಾಸ್ಪದವಾಗಿ ಮೃತಪಟ್ಟ ನವವಿವಾಹಿತೆ ಗೌಸಿಯಾ ಪ್ರಕರಣವನ್ನು ಕೂಲಂಕಷವಾಗಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಡಿವೈಎಫ್ ಐ, ಸಿಐಟಿಯು, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ನಾನಾ ಸಂಘಟನೆಗಳ ನೇತೃತ್ವದಲ್ಲಿ ನಗರದ ಚಿತ್ತವಾಡ್ಗಿ ಪೊಲೀಸ್ ಠಾಣೆಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಿತ್ತವಾಡ್ಗಿಯಲ್ಲಿ ಸೆ.5 ರಂದು ಅನುಮಾನಾಸ್ಪದವಾಗಿ ನವವಿವಾಹಿತೆ ಗೌಸಿಯಾ ಮೃತಪಟ್ಟಿದ್ದರು. ಈ ಕುರಿತು ಸಂಬಂಧಿಕರು ದೂರು ನೀಡಿದ್ದು, ಆದರೆ ಸಹಜ ಸಾವು ಎಂಬಂತೆ ಪ್ರಕರಣ ದಾಖಲಿಸಿಕೊಂಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರೋಜ ಮಾತನಾಡಿ, ಇಂತಹ ಪ್ರಕರಣಗಳು ನಡೆದ ಸಂದರ್ಭದಲ್ಲಿ ಸ್ಥಳೀಯ ಕೆಲವು ಮುಖಂಡರು ಸೇರಿಕೊಂಡು ಆಗಿದ್ದು ಆಗಿ ಹೋಗಿದೆ. ಸತ್ತವಳು ಹಿಂದಕ್ಕೆ ಬರೋದಿಲ್ಲ. ಏನೋ ಒಂದಿಷ್ಟು ಹಣ ಕೊಟ್ಟು ಸರಿ ಮಾಡಿಬಿಡಿ ಎನ್ನುವ ಮೂಲಕ ಸಾಕಷ್ಟು ಪ್ರಕರಣಗಳು ಮುಚ್ಚಿ ಹೋಗುತ್ತವೆ. ಆದರೆ ಚಿತ್ತವಾಡ್ಗಿ ಪ್ರದೇಶದಲ್ಲಿ ಗೌಸಿಯಾಗೆ ಆಗಿರುವ ಅನ್ಯಾಯವನ್ನು ಖಂಡಿಸಲು ಇಷ್ಟೊಂದು ಜನ ಸೇರಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದರು.
ಬಳಿಕ ದಲಿತ ಹಕ್ಕುಗಳ ಸಮಿತಿಯ ಮುಖಂಡ ಎಂ.ಜಂಬಯ್ಯ ನಾಯಕ ಮಾತನಾಡಿ, ಬಂಡೆ ಒರೆಸುವ ಸಂದರ್ಭದಲ್ಲಿ ಜಾರಿಬಿದ್ದು ಗೌಸಿಯಾ ಸತ್ತಿದ್ದಾಳೆ ಎಂಬುದು ಸುಳ್ಳು. ಆ ರೀತಿ ಬಿದ್ದಿದ್ದೇ ಆದರೆ ಹಣೆಗೋ ಅಥವಾ ಹಿಂಭಾಗದ ತಲೆಗೋ ಪೆಟ್ಟಾಗಬೇಕಿತ್ತು. ಬದಲಿಗೆ ಕುತ್ತಿಗೆಗೆ ಗಾಯವಾಗಿರುವುದು ಏಕೆ ಎನ್ನುವ ಪ್ರಶ್ನೆ ಮೂಡುತ್ತದೆ. ಅಲ್ಲದೇ ಸ್ಥಳೀಯರು ಹೇಳುವ ಪ್ರಕಾರ ಗಂಡನ ಮನೆಯವರು ಅನೇಕ ಬಾರಿ ಗೌಸಿಯಾಗೆ ಕಿರುಕುಳ ನೀಡುತ್ತಿದ್ದರು ಎನ್ನುವುದು ನಮ್ಮ ಸಂಘಟನೆಗೆ ಗೊತ್ತಾಗಿದೆ. ಆದ್ದರಿಂದಲೇ ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಯಲ್ಲಿ ಮುಖಂಡರಾದ ಕೆ.ಎಂ.ಸಂತೋಷ, ಎ.ಕರುಣಾನಿಧಿ, ಕೆ.ನಾಗರತ್ನ, ಆರ್.ಭಾಸ್ಕರರೆಡ್ಡಿ ಇನ್ನಿತರರಿದ್ದರು.