ಬಳ್ಳಾರಿ: ಕೇಂದ್ರದ ಮಾಜಿ ಸಚಿವೆ ಸುಷ್ಮಾಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿಯಲ್ಲಿಂದು ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮ ಕಳೆಗುಂದಿದೆ.
ಬಳ್ಳಾರಿಯ ಗಾಂಧಿನಗರ ಮುಖ್ಯ ರಸ್ತೆಯಲ್ಲಿರುವ ಡಾ.ಬಿ.ಕೆ.ಶ್ರೀನಿವಾಸಮೂರ್ತಿ ಅವರ ನಿವಾಸ ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬದಂದು ತಳಿತೋರಣಗಳಿಂದ ಸಿಂಗಾರಗೊಳ್ಳುತ್ತಿತ್ತು. ಬಳ್ಳಾರಿಯ ಮಗಳೆಂದೇ ಕರೆಯಿಸಿಕೊಳ್ಳುವ ಸುಷ್ಮಾಸ್ವರಾಜ್ ಅವರು ಪ್ರತಿವರ್ಷ ಈ ಮನೆಗೆ ಬಂದು ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ವೈದ್ಯ ಕುಟುಂಬ ಆಯೋಜಿಸುವ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ತೆರಳುತ್ತಿದ್ದರು. ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಮಾಜಿ ಸಚಿವೆ ಸುಷ್ಮಾಸ್ವರಾಜ್ ಸಾವನ್ನಪ್ಪಿದ್ದರಿಂದ ವೈದ್ಯ ಕುಟುಂಬದ ಸದಸ್ಯರು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸದಿರಲು ನಿರ್ಧಾರಿಸಿದ್ದಾರೆ.
ಈ ಕುರಿತು ಮಾತನಾಡಿದ ವೈದ್ಯ ಡಾ.ಬಿ.ಕೆ.ಸುಂದರ್ ಅವರು , ಕೇಂದ್ರ ಮಾಜಿ ಸಚಿವೆ ಸುಷ್ಮಾಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಈ ಬಾರಿ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಪೂಜೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಸುಷ್ಮಾಸ್ವರಾಜ್ ನಮ್ಮ ಮನೆಯ ಮಗಳಾಗಿದ್ದರು. ಅವರ ಅಗಲಿಕೆಯಿಂದ ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಆಗಾಗಿ, ಶಾಂತಾಮೂರ್ತಿ ಅವರು ಮನೆಯಲ್ಲಿ ವಿಶ್ರಾಂತಿ ಪಡೆದರೆ, ಡಾ.ಬಿ.ಕೆ.ಸುಂದರ್, ಡಾ.ಬಿ.ಕೆ.ಶ್ರೀಕಾಂತ, ಡಾ.ಜೋಷ್ನಾ, ಡಾ.ಅನುಪಮಾ ಅವರು ತಮ್ಮ ವೈದ್ಯ ಸೇವೆಯನ್ನು ಎಂದಿನಂತೆ ಮುಂದುವರಿಸಿದ್ದಾರೆ.