ಬಳ್ಳಾರಿ: ಜಿಲ್ಲೆಯ ಹಂಪಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಳ್ಳದ್ದಕ್ಕೆ ಕಳೆದ ಮೂರು ತಿಂಗಳಿಂದ ಅಲೆದಾಡುವಂತಾಗಿದೆ ಎಂದು ಆರೋಪಿಸಿ ಮಹಿಳೆಯರಿಬ್ಬರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.
ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದ ವೃದ್ಧೆ ಹೊಸೂರಮ್ಮ ಹಾಗೂ ಅವರ ಸಂಬಂಧಿ ಸ್ವರೂಪ ರಾಣಿ, ಡಿಸಿ ಕಚೇರಿ ಎದುರು ಧರಣಿ ಕುಳಿತು, ಹಂಪಿ ಠಾಣೆಯ ಪೊಲೀಸರಿಗೆ ಧಿಕ್ಕಾರ ಹಾಕಿದ್ದಾರೆ. ಸ್ವರೂಪ ರಾಣಿ ಮಾತನಾಡಿ, ಹೊಸೂರಮ್ಮ ಅವರಿಗೆ ದೃಷ್ಟಿ ದೋಷವಿದೆ. ಅವರ ಸಂಬಂಧಿಕರು ಯಾಮಾರಿಸಿ ಖಾತೆಯಲ್ಲಿದ್ದ ಒಂದೂವರೆ ಲಕ್ಷ ರೂ.ಹಣ ಡ್ರಾ ಮಾಡಿಕೊಂಡು ವಂಚಿಸಿದ್ದಾರೆ. ಈ ಅನ್ಯಾಯದ ಕುರಿತು ದೂರು ದಾಖಲಿಸಲು ಠಾಣೆಗೆ ಹೋದರೆ ಪೊಲೀಸರು ದುಂಡಾವರ್ತನೆ ತೋರುತ್ತಿದ್ದು, ಕಳೆದ ಮೂರು ತಿಂಗಳಿಂದಲೂ ಅಲೆದಾಡಿದರೂ ಮಹಿಳೆ ಯರೆಂಬ ಕನಿಷ್ಠ ಗೌರವ ನೀಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಈಗಾಗಲೇ ಕಳೆದ ವಾರ ಎಸ್ಪಿ ಕಚೇರಿ ಎದುರು ಕೂಡ ಧರಣಿ ನಡೆಸಿ ಮನವಿ ಮಾಡಿದ್ದೇವೆ, ಎಸ್ಪಿ ಕಚೇರಿಗೆ ಹೋದರೂ ದೂರು ದಾಖಲಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ವೃದ್ಧೆ ಹೊಸೂರಮ್ಮ ಮಾತನಾಡಿ, ಜಮೀನಿನ ಮೇಲೆ ಪಡೆದ ಸಾಲ ಸೇರಿದಂತೆ ಖಾತೆಯಲ್ಲಿ ಒಂದು ಲಕ್ಷದ 50 ಸಾವಿರ ರೂ.ಹಣ ಬಿಡಿಸಿಕೊಂಡು ಮೋಸ ಮಾಡಿದ್ದಾರೆ. ಕೇಳಿದರೆ ಒಂದು ಚೀಟಿ ಬರೆದುಕೊಟ್ಟು ಇದನ್ನು ಕೊಟ್ಟರೆ ಹಣ ಕೊಡುತ್ತಾರೆ ಎಂದು ಹೇಳಿ ವಂಚಿಸಿದ್ದಾರೆ. ಪೊಲೀಸರ ಮೊರೆ ಹೋದರೆ ಅವರು ನಮಗೆ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.
ಘಟನೆ ಹಿನ್ನಲೆ: ವೃದ್ಧೆ ಹೊಸೂರಮ್ಮ ಅವರ ಪತಿಯ ಹಿರಿಯ ಸಹೋದರನ ಮಕ್ಕಳಾದ ಯಲ್ಲಪ್ಪ, ಜೋಷಿ, ಹಾಗೂ ದ್ಯಾವಮ್ಮ, ಸುರೇಶಪ್ಪ ಅವರು ಹೊಸೂರಮ್ಮ ಅವರ ಖಾತೆಯಿಂದ ಹಣ ಬಿಡಿಸಿಕೊಂಡು ವಂಚಿಸಿದ್ದಾರೆ. ಇದಕ್ಕೆ ಪೊಲೀಸರು ನ್ಯಾಯ ಕೊಡಿಸುವ ಬದಲು ಮೋಸಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಧರಣಿ ನಿರತ ಮಹಿಳೆಯರ ಆರೋಪವಾಗಿದೆ.
ಇದನ್ನೂ ಓದಿ:ಮತ್ತಿಬ್ಬರು ಡ್ರಗ್ಸ್ ಪೆಡ್ಲರ್ಗಳು ಸಿಸಿಬಿ ಬಲೆಗೆ : 12 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ