ಬಳ್ಳಾರಿ: ಇಂದಿನಿಂದ ಹತ್ತು ದಿನಗಳ ಕಾಲ ತುಂಗಭದ್ರಾ ಜಲಾಶಯದಿಂದ ಬಲದಂಡೆ ಕೆಳಮಟ್ಟದ ಕಾಲುವೆ(ಎಲ್ಎಲ್ಸಿ)ಗೆ ನೀರು ಬಿಡಲಾಯಿತು. ಈ ಯೋಜನೆಗೆ ತುಂಗಭದ್ರಾ ಬೋರ್ಡಿನ ಕಾರ್ಯದರ್ಶಿ ನಾಗಮೋಹನ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಕೇವಲ ಕುಡಿಯುವ ನೀರಿನ ಉದ್ದೇಶದಿಂದ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ. ಬಳ್ಳಾರಿ, ಸಿರುಗುಪ್ಪ ಸೇರಿದಂತೆ ಹೊಸಪೇಟೆ ತಾಲೂಕಿನ 56 ಗ್ರಾಮ ಹಾಗೂ ನೆರೆಯ ಆಂಧ್ರಪ್ರದೇಶದ ಎರಡು ಪಾಯಿಂಟ್ಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿದೆ. ಈ ಹಿನ್ನೆಲೆಯಲ್ಲಿ ನೀರನ್ನು ಹರಿಸಲಾಗಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
1200 ಕ್ಯೂಸೆಕ್ ನೀರನ್ನು ಹರಿಬಿಡಲು ನಿರ್ಧರಿಸಲಾಗಿದ್ದು, ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ರೈತರು ಬಳಕೆ ಮಾಡಿಕೊಳ್ಳಬಾರದೆಂದು ಆದೇಶಿಸಿದ್ದಾರೆ. ತುಂಗಭದ್ರಾ ಜಲಾಶಯದ ಸೂಪರಿಂಟೆಂಡೆಂಟ್ ಆಫ್ ಎಂಜಿನಿಯರ್ ವೆಂಕಟರಮಣ, ಕಾರ್ಯಪಾಲಕ ಅಭಿಯಂತರ ಸುರೇಶ ರೆಡ್ಡಿ, ಸಹಾಯಕ ಎಂಜಿನಿಯರ್ ರಾಮಕೃಷ್ಣ, ಶ್ರೀನಿವಾಸಲು ಹಾಗೂ ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದರು.