ಬಳ್ಳಾರಿ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಟಿಬಿ ಬೋರ್ಡ್ ಕಾರ್ಯದರ್ಶಿ ಜಿ. ನಾಗಮೋಹನ್ ತಿಳಿಸಿದ್ದಾರೆ.
ಕ್ರಸ್ಟ್‌ಗೇಟ್ ನಂಬರ್ 21ರ ರ್‍ಯಾಡಿಕನ್ ಗಿಯರ್ ಬಾಕ್ಸ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಹಾನಿಯಾಗಿತ್ತು. ತಕ್ಷಣವೇ ಅದರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಹತ್ತು ದಿನದೊಳಗೆ ಸರಿಪಡಿಸುವ ಕಾರ್ಯ ಪೂರ್ಣಗೊಂಡಿದೆ. ತುರ್ತು ಪರಿಸ್ಥಿತಿ ಎದುರಾದರೆ 21ನೇ ಕ್ರಸ್ಟ್‌ಗೇಟ್‌ನಿಂದಲೂ ನೀರು ಹರಿಸಬಹುದು ಎಂದು ಹೇಳಿದ್ದಾರೆ. ಜಲಾಶಯಕ್ಕೆ ಒಟ್ಟು 33 ಕ್ರಸ್ಟ್‌ಗೇಟ್‌ಗಳಿದ್ದು, ಇನ್ನುಳಿದ 32 ಕ್ರಸ್ಟ್‌ಗೇಟ್‌ಗಳು ಉತ್ತಮ ಸ್ಥಿತಿಯಲ್ಲಿವೆ. ಇವುಗಳಿಂದ ಒಟ್ಟು 6.50 ಲಕ್ಷ ಕ್ಯೂಸೆಕ್ ವರೆಗೆ ನೀರು ಹರಿಸಬಹುದು ಎಂದು ಇದೇ ವೇಳೆ ತಿಳಿಸಿದ್ದಾರೆ.
ಡ್ಯಾಂ ನಿರ್ಮಾಣವಾದ ನಂತರ ಈ ರೀತಿಯ ತಾಂತ್ರಿಕ ದೋಷ ಈ ಹಿಂದೆ ಕಂಡು ಬಂದಿಲ್ಲ. ಈ ಹಿಂದೆ 1992ರಲ್ಲಿ 3.69 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿತ್ತು. ಈಗ ಕೂಡ ನೀರು ಹರಿಸುವ ಸ್ಥಿತಿಯಲ್ಲಿ ಜಲಾಶಯ ಇದೆ ಎಂದು ತಿಳಿಸಿದ್ದಾರೆ.
ಒಟ್ಟು ಮೂರು ಕ್ರಸ್ಟ್‌ಗೇಟ್‌ಗಳಲ್ಲಿ ತಾಂತ್ರಿಕ ದೋಷವಿತ್ತು. ಎರಡರಲ್ಲಿ ಸಣ್ಣ ಪ್ರಮಾಣದ ತಾಂತ್ರಿಕ ತೊಂದರೆ ಇತ್ತು, ಒಂದಕ್ಕೆ ಮಾತ್ರ ಹೆಚ್ಚಿನ ಹಾನಿಯಾಗಿತ್ತು. ಇದರಿಂದಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಕಾರ್ಯದರ್ಶಿ ನಾಗಮೋಹನ್ ಅವರು ಈ ಹಿಂದೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದರು.