ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಮಾ.31ರವರೆಗೆ ಕಾಲುವೆಗಳ ಮೂಲಕ ಬೇಸಿಗೆ ಬೆಳೆಗೆ ನೀರು ಬಿಡಲು ಐಸಿಸಿ ಸಭೆಯಲ್ಲಿ ತಿರ್ಮಾನಿಸಲಾಗಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಬೆಳೆಗಳಿಗೆ ಅನುಕೂಲವಾಗುವಂತೆ ಏ.10ರವರೆಗೆ ನೀರು ಹರಿಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ. ಪುರುಷೋತ್ತಮಗೌಡ ಹೇಳಿದ್ದಾರೆ.
ನಗರದಲ್ಲಿರುವ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.10ರವರೆಗೆ ನೀರು ಬಿಡದಿದ್ದರೆ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರಿಗೆ ತೊಂದರೆಯಾಗಲಿದೆ. ಬಿರು ಬೇಸಿಗೆ ಬೆಳೆಗಳಿಗೆ ನೀರಿನ ಅಭಾವ ಎದುರಾಗಿ ಬೆಳೆಗಳೆಲ್ಲ ಸಂಪೂರ್ಣ ಒಣಗಿ ಹೋಗಲಿವೆ. ಹೀಗಾಗಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಉಸ್ತುವಾರಿ ಸಚಿವ ಆನಂದ ಸಿಂಗ್ ಅಲ್ಲದೆ ತುಂಗಭದ್ರಾ ಮಂಡಳಿ ಮತ್ತು ಬೋರ್ಡ್ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದು, ಅಧಿಕಾರಿಗಳು ಏ.10ರವರೆಗೆ ನೀರು ಬಿಡುವುದಕ್ಕೆ ಮೌಖಿಕ ಒಪ್ಪಿಗೆ ನೀಡಿದ್ದಾರೆ. ಲಿಖಿತ ಒಪ್ಪಿಗೆಯನ್ನ ಕೂಡ ಶೀಘ್ರದಲ್ಲೇ ನೀಡಲಿದ್ದಾರೆ ಎಂದರು.
ಪ್ರಸ್ತುತ ಜಲಾಶಯದಲ್ಲಿ 17 ಟಿಎಂಸಿ ನೀರಿದ್ದು, 2 ಟಿಎಂಸಿ ಡೆಡ್ ಸ್ಟೋರೆಜ್ ಮತ್ತು 1 ಟಿಎಂಸಿ ಆವಿಯಾಗಿ ಹೋಗಲಿದೆ. ಸುಮಾರು 13 ಟಿಎಂಸಿ ನೀರು ಮಾತ್ರ ಉಳಿಯಲಿದೆ. ಇದರಲ್ಲಿ 5.657 ಟಿಎಂಸಿ ಆಂಧ್ರದ ಪಾಲಿದೆ. ಕರ್ನಾಟಕದ ಪಾಲಿಗೆ 7.934 ಟಿಎಂಸಿ ಮಾತ್ರ ಉಳಿಯುತ್ತದೆ. ಈ ನೀರಿನಿಂದ ಬೇಸಿಗೆ ಬೆಳೆ ಸಂರಕ್ಷಿಸಲಾಗುವುದಿಲ್ಲ. ಈಗ ಹೇಗಿದ್ದರೂ ಭದ್ರಾ ಜಲಾಶಯದಿಂದ 1.6 ಟಿಎಂಸಿ ನೀರು ಬರುತ್ತಿದೆ. ಅದರ ಜೊತೆಗೆ ಜಿಂದಾಲ್ ಸೇರಿ ನಾನಾ ಕಾರ್ಖಾನೆಗಳಿಗೆ ಪೂರೈಸುವ ನೀರನ್ನು ಕಡಿತಗೊಳಿಸಬೇಕು. ಇದರಿಂದ ಅರ್ಧ ಟಿಎಂಸಿ ನೀರು ಉಳಿಯಲಿದೆ. ಜೊತೆಗೆ ನದಿ ಮೂಲಕ ಆಂಧ್ರಕ್ಕೆ ಕೊಡಲಿರುವ ಅರ್ಧ ಟಿಎಂಸಿ ನೀರನ್ನು ತಡೆ ಹಿಡಿಯುತ್ತೇವೆ. ಈ ಸಂಬಂಧ ನೆರೆಯ ಆಂಧ್ರಪ್ರದೇಶ ಸರ್ಕಾರವನ್ನು ಮನವೊಲಿಸಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಿದಾಗ ನೀರಿನ ಸದ್ಬಳಕೆಯಾಗಲಿದೆ. ಈ ಎಲ್ಲಾ ಕೆಲಸವನ್ನು ಅಧಿಕಾರಿಗಳು ಮಾಡೋದಾಗಿ ತಿಳಿಸಿದ್ದಾರೆ ಎಂದರು.
ಈ ವೇಳೆ ರೈತ ಸಂಘದ ಮುಖಂಡರಾದ ಜಾಲಿಹಾಳ್ ಶ್ರೀಧರಗೌಡ, ಗಂಗಾವತಿ ವಿರೇಶ್, ಶ್ರೀಧರಗಡ್ಡೆ ವೀರನಗೌಡ, ಸತ್ಯನಾರಾಯಣ ಇದ್ದರು.