ಹೊಸಪೇಟೆ/ಬಳ್ಳಾರಿ: ತುಂಗಭದ್ರಾ ಜಲಾಶಯದ ಒಳಹರಿವು ಹಾಗೂ ಹೊರಹರಿವು ಪ್ರಮಾಣ ತಗ್ಗಿದ್ದು, ಮುಳುಗಡೆಯಾಗಿದ್ದ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ.
ಜಲಾಶಯದಿಂದ ನದಿಗೆ 74,016 ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಎರಡು ಅಡಿ ಎತ್ತರದಲ್ಲಿ 20 ಕ್ರಸ್ಟ್ ಗೇಟ್ ಹಾಗೂ ಒಂದು ಅಡಿ ಎತ್ತರದಲ್ಲಿ 8 ಕ್ರಸ್ಟ್ ಗೇಟ್ ಮೂಲಕ ನೀರನ್ನು ಹರಿಸಲಾಗುತ್ತಿದೆ. ಕಾಲುವೆಗಳಿಗೆ 8,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಸದ್ಯ ಜಲಾಶಯಕ್ಕೆ 1,13,600 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದು ಒಟ್ಟು 1631.76 ಅಡಿ ಇದ್ದು, 96.122 ಟಿಎಂಸಿ ನೀರು ಸಂಗ್ರಹವಾಗಿದೆ. ನಿನ್ನೆ ಒಂದು ಲಕ್ಷಕ್ಕಿಂತ ಹೆಚ್ಚು ನೀರು ನದಿಗೆ ಹರಿಸಿದ್ದರಿಂದ ಕಂಪ್ಲಿ ಸೇತುವೆ ಸಂಚಾರವನ್ನು ನಿಷೇಧಿಸಲಾಗಿತ್ತು. ಈಗ ಹೊರಹರಿವು ತಗ್ಗಿದ್ದು, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಹಂಪಿಯ ನದಿ ಪಾತ್ರದ ಮುಳುಗಡೆಯಾಗಿದ್ದ ಸ್ಮಾರಕಗಳು ಕಾಣತೊಡಗಿವೆ.