ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ನಿಯಂತ್ರಣದ ಸಲುವಾಗಿ ಜುಲೈ 21ರಂದು ಟ್ರಾಮಾಕೇರ್ ಸೆಂಟರ್ ಅನ್ನ ಸಾರ್ವಜನಿಕ ಸೇವೆಗಾಗಿ ಲೋಕಾರ್ಪಣೆ ಮಾಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 21 ರಂದು ಬೆಳಗ್ಗೆ 11 ಗಂಟೆಗೆ ಟ್ರಾಮಾಕೇರ್ ಸೆಂಟರ್ಗೆ ಚಾಲನೆ ನೀಡಲಾಗುವುದು. ಬಹುದಿನಗಳಿಂದ ನೆನೆಗುದಿಗೆ ಬಿದ್ದ ಈ ಟ್ರಾಮಾಕೇರ್ ಸೆಂಟರ್ನಿಂದ ಕೋವಿಡ್-19 ಸೋಂಕಿತರಿಗೆ ಮೊದಲನೇಯ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನ ಈ ಟ್ರಾಮಾಕೇರ್ ಸೆಂಟರ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಆದರೆ, ಈ ಕೋವಿಡ್ ಸಂದರ್ಭದಲ್ಲಿ ಅವರನ್ನ ಆಹ್ವಾನಿಸೋದು ಬೇಡ ಎಂದು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ. ಹೀಗಾಗಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರನ್ನ ಆಹ್ವಾನಿಸಲಾಗಿದೆ. ವೈದ್ಯಕೀಯ ಲೋಕದಲ್ಲಿ ಅವರು ಪರಿಣಿತರಿದ್ದಾರೆ. ಅವರಿಂದ ಈ ಟ್ರಾಮಾಕೇರ್ ಸೆಂಟರ್ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.