ಬಳ್ಳಾರಿ: ವಾಟರ್ ಸರ್ವೀಸಿಂಗ್ ನೀರನ್ನು ಚರಂಡಿಗೆ ಹರಿಸದಂತೆ ಸೂಚನೆ ನೀಡಿದ್ದಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಕೂಡ್ಲಗಿ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು-ಹೊಸಳ್ಳಿ ರಸ್ತೆಯಲ್ಲಿರೋ ವಿದ್ಯಾನಗರ ವಾಟರ್ ಸರ್ವೀಸ್ ಪಾಯಿಂಟ್ ಹತ್ತಿರ ಇರುವ ಒಳಚರಂಡಿಗೆ ಮರಳು ಮಿಶ್ರಿತ ನೀರನ್ನು ಹರಿಬಿಡದಂತೆ ತಿಳಿಸಿದಾಗ ಸಿಟ್ಟಿಗೆದ್ದ ಮಾಲೀಕ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆ ವಾಟರ್ ಸರ್ವೀಸ್ ಮಾಲೀಕರಾದ ಸಮೃತ್ ಸಾಹೇಬ್, ಇಬ್ರಾಹಿಂ ಅಲಿಯಾಸ್ ಮುನ್ನ, ಇಸ್ಮಾಯಿಲ್, ಸಾವುದ್ ಎಂಬುವವರ ವಿರುದ್ಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಹಾಗೂ ಕರ್ತವ್ಯನಿರತ ಮುಖ್ಯಾಧಿಕಾರಿಗೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಸದ್ಯ ಮೂವರನ್ನ ಕೂಡ್ಲಿಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೂಡ್ಲಿಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಕರುದ್ದೀನ್ ಹಾಗೂ ಪೌರಕಾರ್ಮಿಕ ಚೌಡಪ್ಪ ಎಂಬುವವರ ಮೇಲೆ ಹಲ್ಲೆ ಮಡಲಾಗಿದೆ. ವಾಟರ್ ಸರ್ವೀಸಿಂಗ್ ಅಂಗಡಿಯನ್ನ ನಡೆಸುತ್ತಿದ್ದ 4 ಮಂದಿ ಆರೋಪಿತರು ಮರಳು ಮಿಶ್ರಿತ ನೀರನ್ನು ಒಳಚರಂಡಿಗೆ ಹರಿಬಿಡುತ್ತಿದ್ದರು. ಅದರಿಂದ ಒಳಚರಂಡಿ ಬ್ಲಾಕ್ ಆಗುತ್ತಿತ್ತು. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಕರುದ್ದೀನ್, ಪೌರಕಾರ್ಮಿಕ ಚೌಡಪ್ಪ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ವಾಟರ್ ವಾಷಿಂಗ್ ನೀರನ್ನು ಒಳಚರಂಡಿಗೆ ಹರಿಬಿಡದಂತೆ ಸೂಚನೆ ನೀಡಿದ್ದಾರೆ. ಇದರಿಂದ ಕೋಪಗೊಂಡ ಮಾಲೀಕ ಹಾಗೂ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.