ಬಳ್ಳಾರಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಇಂದು ನಡೆಯಲಿದ್ದು, ಜಿಲ್ಲೆಯಲ್ಲಿ ಅಂದಾಜು 6,753 ಶಿಕ್ಷಕ ಮತದಾರರು ಮತ ಚಲಾಯಿಸಲಿದ್ದಾರೆ. ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯಲ್ಲಿ 4,231 ಮಂದಿ ಶಿಕ್ಷಕರು ಹಾಗೂ 2,522 ಮಂದಿ ಶಿಕ್ಷಕಿಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ನಗರದಲ್ಲಿ ನಾಲ್ಕು ಕಡೆಗಳಲ್ಲಿ ಮತಗಟ್ಟೆ ಕೇಂದ್ರಗಳನ್ನ ತೆರೆಯಲಾಗಿದೆ. ಉಳಿದಂತೆ ಜಿಲ್ಲೆಯ ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ತಲಾ ಒಂದೊಂದು ಮತಗಟ್ಟೆಗಳನ್ನು ತೆರೆಯಲಾಗಿದೆ. 26 ಮತಗಟ್ಟೆ ಕೇಂದ್ರಗಳನ್ನ ಜಿಲ್ಲಾದ್ಯಂತ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಪೊಲೀಸ್ ಬಂದೋಬಸ್ತ್: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 6 ಡಿಎಸ್ಪಿ, 12 ಪಿಐ, 28 ಪಿಎಸ್‌ಐ, 76 ಎಎಸ್‌ಐ, 106 ಹೆಚ್ಸಿ, 192 ಪಿಸಿ ಹಾಗೂ 29 ಮಹಿಳಾ ಸಿಬ್ಬಂದಿ, 11 ಡಿಎಆರ್, 02 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ ಕನಿಷ್ಠ 1 ಎಎಸ್‌ಐ, 1 ಹೆಚ್ಸಿ, 1 ಪಿಸಿ ಹಾಗೂ 1 ಮಹಿಳಾ ಪೊಲೀಸ್ ಸಿಬ್ಬಂದಿಯನ್ನ ನೇಮಿಸಿದ್ದು, ಪಿಎಸ್‌ಐ ಅವರನ್ನ ಮತಗಟ್ಟೆ ಉಸ್ತುವಾರಿ ಅಧಿಕಾರಿಯಾಗಿ ನೇಮಿಸಲಾಗಿದೆ.
ಈ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕಡ್ಡಾಯವಾಗಿ ಕೋವಿಡ್-19 ಸೋಂಕು ತಗುಲದಂತೆ ಮಾಸ್ಕ್ ಧರಿಸೋದು, ಸಾಮಾಜಿಕ ಆಂತರ ಕಾಪಾಡುವುದು, ಸ್ಯಾನಿಟೈಸರ್ ಬಳಸಲು ಸೂಚಿಸಿದೆ. ಅದೇ ರೀತಿ ಶಿಕ್ಷಕ ಮತದಾರರಿಗೂ ಸಹ ಕೊವಿಡ್-19 ಮುಂಜಾಗ್ರತೆ ಕ್ರಮಗಳನ್ನು ಪಾಲಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ಪ್ರತಿ ಮತಗಟ್ಟೆ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ (ಎಸ್ಎಂಎಸ್) ಫಲಕ 1 ಫ್ಲೆಕ್ಸ್ಗಳನ್ನು ಅಳವಡಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ತಿಳಿಸಿದ್ದಾರೆ.