ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಯ ಮಾಲೀಕರು 3 ಲಕ್ಷ ಕೋಟಿ ರೂ.ಗಳ ಒಡೆಯರಿದ್ದು, ಅವರ ವಿರುದ್ಧ ದನಿ ಎತ್ತಿದ್ರೆ ಹುಷಾರ್ ಎಂಬಂಥ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ದೂರಿದ್ದಾರೆ.
ಜನಾಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ಪಾಲ್ಗೊಳ್ಳುವ ಮುನ್ನ ಕೆಲವರು ನನ್ನ ಮೊಬೈಲ್ಗೆ ಕರೆ ಮಾಡಿ ಸ್ವಾಮಿ ನೀವು ಕೈ ಹಾಕಿರುವ ವ್ಯಕ್ತಿ ಸಾಮಾನ್ಯನಲ್ಲ. ಅವರು ಬಳ್ಳಾರಿಯಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕೋಟಿಗಟ್ಟಲೆ ಬಂಡವಾಳ ಹೂಡಿದ್ದಾರೆ. ಸರ್ಕಾರಗಳು ಮಂಡಿಸುವ ಬಜೆಟ್ನಲ್ಲಿ ಬಹುಪಾಲು ತೆರಿಗೆಯನ್ನು ಅವರು ಪಾವತಿಸುತ್ತಿದ್ದಾರೆ. ಈ ಕುರಿತು ಹುಷಾರ್ ಆಗಿರಿ ಎಂದು ಬೆದರಿಕೆ ಕರೆ ಬರುತ್ತಿವೆ ಎಂದರು.
ನಾನೂ ಕೂಡ ಜಿಂದಾಲ್ ಜೊತೆಗೆ ವ್ಯವಹಾರ ಇಟ್ಟು ಕೊಂಡಿರುವೆ:
ನಾನೂ ಕೂಡ ಜಿಂದಾಲ್ ಜೊತೆಗೆ ಉತ್ತಮ ವ್ಯವಹಾರಿಕ ಸಂಬಂಧ ಹೊಂದಿದ್ದು, ಅದಿರನ್ನುಆ ಕಂಪನಿಗೆ ನೀಡಿರುವೆ. ಹಾಗಂತ, ಜಿಂದಾಲ್ ಕಂಪನಿಯಲ್ಲಿ ಉಚಿತವಾಗಿ ಒಂದು ಲೋಟ ಟೀ ಕೂಡಾ ಕುಡಿದಿಲ್ಲ. ಉಚಿತವಾಗಿ ಗೆಸ್ಟ್ ಹೌಸ್ನಲ್ಲಿ ನಾನು ಮಲಗಿಲ್ಲ. ಉಚಿತವಾಗಿ ವಿಮಾನಯಾನ ಮಾಡಿಲ್ಲ ಎಂದು ಹೇಳಿದ್ರು.
ಈ ಜಿಲ್ಲೆಯ ಜನರ ಹಿತಾಸಕ್ತಿಗೋಸ್ಕರ ರಾಜ್ಯ ಸರ್ಕಾರ ಜಿಂದಾಲ್ಗೆ ಸಾವಿರಾರು ಎಕರೆ ಭೂಮಿಯನ್ನು ಎಕರೆಗೆ ಕೇವಲ ಒಂದೂವರೆ ಲಕ್ಷ ರೂ.ಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಈ ದರ ಕೇವಲ ಜಿಂದಾಲ್ಗೆ ಮಾತ್ರ ಸೀಮಿತವಾಗಿದೆಯೋ ಅಥವಾ ಸ್ಪಾಂಜ್ ಐರನ್ ಕಂಪನಿ ಶುರು ಮಾಡೋರಿಗೂ ಇದೇ ದರದಲ್ಲಿ ಭೂಮಿ ಮಂಜೂರಾತಿ ಮಾಡುತ್ತಾರೋ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಪುಣ್ಯಾತ್ಮ ಹೆಚ್.ಕೆ.ಪಾಟೀಲ್:
ಶಾಸಕ ಹೆಚ್.ಕೆ.ಪಾಟೀಲ್ ಅವರು ನಮ್ಮ ಜಿಲ್ಲೆಯ ಪರವಾಗಿ ನಿಂತುಕೊಂಡು ವಿರೋಧ ಮಾಡದಿದ್ದರೆ ಸಾವಿರಾರು ಎಕರೆ ಭೂಮಿಯನ್ನು ಅನ್ಯಾಯವಾಗಿ ನಾವೆಲ್ಲ ಕಳೆದುಕೊಳ್ಳುತ್ತಿದ್ದೆವು. ಹೀಗಾಗಿ ಭೂಮಿ ಪರಭಾರೆ ವಿರೋಧಿಸಿ ಹೋರಾಟದಲ್ಲಿ ನೀವೆಲ್ಲಾ ಕೈ ಜೋಡಿಸಬೇಕು ಎಂದು ಜನರಿಗೆ ಕರೆ ನೀಡಿದರು.