ಬಳ್ಳಾರಿ: ಅಡ್ಡ ದಾರಿ ಹಿಡಿದವರನ್ನು ಸರಿದಾರಿಗೆ ತರಬೇಕಾದ ಪೊಲೀಸರೇ ಅಡ್ಡ ದಾರಿ ಹಿಡಿದು, ದೂರು ನೀಡಿದ್ದ ಕಳ್ಳತನ ಪ್ರಕರಣವನ್ನ ಮುಚ್ಚಿ ಹಾಕಿ ಕಳುವಾದ ಮಾಲನ್ನ ತಾವೇ ಗುಳುಂ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನವಾಗುತ್ತೆ. ನಗದು ಹಣ ಹಾಗೂ ಚಿನ್ನಾಭರಣ ದೋಚಿರುವ ಪ್ರಕರಣವದು. ಈ ಕಳ್ಳತನ ಪ್ರಕರಣವು ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರುತ್ತಾದ್ರೂ ಯಾವುದೇ ಪ್ರಕರಣವನ್ನು ಪೊಲೀಸರು ದಾಖಲು ಮಾಡಿಕೊಳ್ಳಲ್ಲ. ಪ್ರಕರಣ ದಾಖಲಿಸದೇ ತನಿಖೆಯನ್ನು ಶುರುಮಾಡಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನ ಬಂಧಿಸುತ್ತಾರೆ ಹೊರತು ಕಸ್ಟಡಿಗೆ ಕಳಿಸೋಲ್ಲ. ಬದಲಿಗೆ ಅವರಿಂದ ತಲಾ ಇಂತಿಷ್ಟು ಹಣ ವಸೂಲಿ ಮಾಡಿ ಕಳ್ಳರನ್ನ ಬಿಟ್ಟು ಕಳಿಸುತ್ತಾರೆ.
ಕಳುವಾದ ಮಾಲೀಕರಿಗೆ ವಸೂಲಾತಿ ಮಾಡಿದ ಹಣದಲ್ಲಿ ಕೊಂಚಮಟ್ಟಿಗೆ ಅವರ ಕೈಗಿತ್ತು ಈ ಪ್ರಕರಣ ಇಲ್ಲಿಗೆ ಮುಕ್ತಾಯವಾಯಿತು. ಯಾವ ಕೇಸಿಲ್ಲ. ಏನೂ ತನಿಖೆಯಿಲ್ಲ ಅಂತೆಲ್ಲಾ ಉದ್ಘಾರದ ಮಾತುಗಳನ್ನಾಡಿ ಕಳಿಸುತ್ತಾರೆ. ಇಡೀ ಪ್ರಕರಣವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರ ಬಳಿ ಬರುತ್ತೆ. ಮನೆಯ ಮಾಲಕಿ ಗಂಗಮ್ಮ ಎಂಬುವರು ತಮಗಾದ ಅನ್ಯಾಯವನ್ನು ತಿಳಿಸಲು ಎಸ್ಪಿಯವರ ಕಚೇರಿಯತ್ತ ಬರುತ್ತಾಳೆ. ಇಡೀ ಪ್ರಕರಣದ ಸನ್ನಿವೇಶವನ್ನ ಎಳೆಎಳೆಯಾಗಿ ಬಿಚ್ಚಿಡುತ್ತಾಳೆ. ಅದಕ್ಕೆ ಅಚ್ಚರಿಗೊಂಡ ಎಸ್ಪಿ ಬಾಬಾ ಅವರು ಹಚ್ಚೊಳ್ಳಿ ಪಿಎಸ್ಐ ಶಂಕರಪ್ಪ ಹಾಗೂ ಸಿರುಗುಪ್ಪ ಸಿಪಿಐ ಟಿ.ಆರ್.ಪವಾರ ಅವರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಘಟನೆಯ ವಿವರ: 2019 ಡಿಸೆಂಬರ್ 03 ರಂದು ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮದ ಗಂಗಮ್ಮ ಎಂಬುವವರ ಮನೆಯಲ್ಲಿ ಈ ಕಳ್ಳತನವಾಗಿತ್ತು. 3 ತೊಲೆ ಬಂಗಾರ ಮತ್ತು 12 ಸಾವಿರ ರೂ.ಗಳನ್ನ ಹಚ್ಚೊಳ್ಳಿ ಗ್ರಾಮದ ಆರೋಪಿಗಳು ಕದ್ದಿದ್ದರು. ಈ ಸಂಬಂಧ ಮನೆಯ ಮಾಲೀಕರಾದ ಗಂಗಮ್ಮ ಹಚ್ಚೊಳ್ಳಿ ಗ್ರಾಮದ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ ವಹಿಸಿದ್ದಲ್ಲದೇ, ಆರೋಪಿಗಳನ್ನು ಠಾಣೆಗೆ ಕರೆತಂದು ಬೆದರಿಸಿ, ಕಳ್ಳತನ ಮಾಡಿದ್ದ ಮಾಲನ್ನು ಅವರಿಂದ ಪಡೆದ ಪೊಲೀಸರು ಹಂಚಿಕೊಂಡಿದ್ದಾರೆ. ತೆಕ್ಕಲಕೋಟೆ ಸಿಪಿಐ ಕಾಳಿಕೃಷ್ಣ ನೇತೃತ್ವದ ತಂಡವು ತನಿಖೆ ನಡೆಸಿ ಸಮಗ್ರ ವರದಿಯನ್ನು ಎಸ್ಪಿಯವರಿಗೆ ನೀಡಲಾಗಿತ್ತು. ಅಮಾನತಾದ ಪೊಲೀಸರ ಬಳಿ ಇದ್ದ ಕಳ್ಳತನದ ಮಾಲನ್ನು, ಆರೋಪಿಗಳನ್ನು ಕೋರ್ಟ್ಗೆ ಸಬ್ ಮಿಟ್ ಮಾಡಲಾಗಿದೆ.