ಬಳ್ಳಾರಿ: ವಿದ್ಯುತ್ ವ್ಯತ್ಯಯದಿಂದ ವೆಂಟಲೇಟರ್ಗಳು ಸ್ತಬ್ದಗೊಂಡ ಹಿನ್ನೆಲೆಯಲ್ಲಿ ವಿಮ್ಸ್ ಅಸ್ಪತ್ರೆಯಲ್ಲಿ ಐವರು ರೋಗಿಗಳು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಡಾ.ಸ್ಮಿತಾ ನೇತೃತ್ವದ ತನಿಖಾ ತಂಡ ಆಗಮಿಸಿದ್ದು ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿ ವೆಂಟಿಲೇಟರ್ ಸ್ಥಳಿತಗೊಂಡಿದ್ದರಿಂದ ರೋಗಿಗಳು ನಿಧನರಾಗಿದ್ದಾರೆಂದು ಮೃತರ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಆದರೆ ರೋಗಿಗಳಿಗೆ ನೀಡಿರುವ ಟ್ರಿಟ್ಮೆಂಟ್ ಆಧಾರದ ಮೇಲೆ ವಾಸ್ತವತೆಯನ್ನು ಕಂಡುಕೊಳ್ಳಲು ತನಿಖಾ ತಂಡ ಮುಂದಾಗಿದೆ.
ಐಸಿಯುಗೆ ವಿದ್ಯುತ್ ಸಂಪರ್ಕದಿಂದ ತೊಂದರೆಯಾಗಿದೆಯಾ, ವಿದ್ಯುತ್ ಸರಬರಾಜಿಗೆ ಪರ್ಯಾಯ ವ್ಯವಸ್ಥೆ ಇದೆಯಾ, ಅಲ್ಲಿ ನಿಯಮಗಳು ಪಾಲನೆಯಾಗಿವೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸದಸ್ಯರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ವಿಮ್ಸ್ನಲ್ಲಿ ರೋಗಿಗಳ ಸಾವು ಪ್ರಕರಣ: ಅಧೀಕ್ಷಕ ಸೇರಿ ಐವರಿಗೆ ನೋಟಿಸ್ ಜಾರಿ
ಬೆಂಗಳೂರಿನ ಬಿಎಂಸಿಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕರಾದ ಡಾ.ಸ್ಮಿತಾ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸಿದ್ದಿಕಿ ಅಹಮದ್, ಬಿಎಂಸಿಯ ಜನರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ. ದಿವಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಯಕ ಅಭಿಯಂತರ ಯೋಗೇಶ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಉಮಾ ಕೆ.ಎ. ಅವರನ್ನೊಳಗೊಂಡ ತಂಡ ವಿಮ್ಸ್ಗೆ ಭೇಟಿ ನೀಡಿದೆ.