ಬಳ್ಳಾರಿ: ಮುಜರಾಯಿ ಇಲಾಖೆ ವತಿಯಿಂದ ಒಂದು ಸಾವಿರಕ್ಕೂ ಹೆಚ್ಚು ಸಾಮೂಹಿಕ ವಿವಾಹಗಳನ್ನು ನೆರವೇರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಆಯೋಜಿಸಿದ್ದ ಮುಜರಾಯಿ ಹಾಗೂ ಮೀನುಗಾರಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 190ಕ್ಕೂ ಅಧಿಕ ಎ ದರ್ಜೆಯ ದೇಗುಲಗಳಿವೆ. ಆ ಪೈಕಿ ನೂರು ದೇಗುಲಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಮದುವೆ ಒಂದಕ್ಕೆ ಕನಿಷ್ಠ 40,000 ರೂ.ಗಳನ್ನು ವ್ಯಯ ಮಾಡಲಾಗುವುದು, ವಧುವಿಗೆ ಮಾಂಗಲ್ಯ ಸೇರಿದಂತೆ ಇತರೆ ಖರ್ಚಿಗಾಗಿ 10,000 ನಗದನ್ನು ನೀಡಲಾಗುವುದು. ವರನ ಬಟ್ಟೆ ಸೇರಿದಂತೆ ಇನ್ನಿತರೆ ಖರೀದಿಗಾಗಿ 5,000ರೂ. ಗಳನ್ನು ನೀಡಲಾಗುವುದೆಂದರು. ಮೊದಲ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರನ್ನಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಆರ್ಟ್ ಆಫ್ ಲಿವಿಂಗ್ನ ರವಿಶಂಕರ ಗುರೂಜಿ, ಇನ್ಫೋಸಿಸ್ ಕಂಪನಿಯ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಆಹ್ವಾನಿಸಲಾಗುವುದೆಂದು ಸಚಿವರು ಮಾಹಿತಿ ನೀಡಿದ್ರು.