ಬಳ್ಳಾರಿ : ಕೋವಿಡ್-19 ಮಹಾಮಾರಿಯಿಂದಾಗಿ ಮುಚ್ಚಿದ್ದ ಶಾಲೆಗಳನ್ನು ಮತ್ತೆ ತೆರೆಯಲು ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಬರುವ ಜ. 1ರಂದು ಶಾಲೆಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿದೆ.
ಶಾಲಾ ಪ್ರಾರಂಭಕ್ಕೆ ಮತ್ತು ಅದರ ಮುನ್ನ ಕೈಗೊಳ್ಳಬೇಕಾದ ಸಿದ್ಧತಾ ಕ್ರಮಗಳನ್ನು ಜಿಲ್ಲೆಯ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಕಡ್ಡಾಯವಾಗಿ ಅನುಸರಿಸುವಂತೆ ಜಿಪಂ ಸಿಇಒ ಕೆ ಆರ್ ನಂದಿನಿ ಸೂಚನೆ ನೀಡಿದ್ದಾರೆ.
ಈಗಾಗಲೇ ಡಿಎಸ್‌ಇಆರ್‌ಟಿಯಿಂದ ಬಿಡುಗಡೆಗೊಂಡಿರುವ ಶಾಲಾ ಪ್ರಾರಂಭ ಮಾರ್ಗಸೂಚಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಪರಿಷ್ಕೃತ ಸುತ್ತೋಲೆ ಅನುಸರಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು, ಪಾಲಕರು, ಪೋಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಸಾರ್ವಜನಿಕರು, ಮಕ್ಕಳು ಪುನಃ ಶಾಲೆಗಳಿಗೆ ತೆರಳಲು ಧೈರ್ಯ ತುಂಬುವುದರ ಮೂಲಕ ಮಕ್ಕಳನ್ನು ಮಾನಸಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದು ತಿಳಿಸಿದ್ದಾರೆ.
ಎಲ್ಲಾ ತರಗತಿಯ ಮಕ್ಕಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ. ಸ್ವ ಇಚ್ಛೆಯಿಂದ ಪೋಷಕರ ಒಪ್ಪಿಗೆ ಪತ್ರದ ಮೇರೆಗೆ ಶಾಲೆಗೆ ಹಾಜರಾಗಬಹುದು. ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕವೂ ತರಗತಿಗಳನ್ನು ಆಲಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
*ವಿದ್ಯಾಗಮ ಜ.1ರಿಂದ ಪ್ರಾರಂಭ :
6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ಜ.1ರಿಂದ ಪ್ರಾರಂಭವಾಗಲಿವೆ. 1 ರಿಂದ 5ನೇ ತರಗತಿಗೆ ವಿದ್ಯಾಗಮ ಜ. 14ರಿಂದ ಪ್ರಾರಂಭವಾಗಲಿವೆ ಎಂದು ಡಿಡಿಪಿಐ ತಿಳಿಸಿದ್ದಾರೆ.
ಶಿಕ್ಷಕರ ಹಾಗೂ ಸಿಬ್ಬಂದಿಯ ಕೋವಿಡ್-19 ಪರೀಕ್ಷೆ ವರದಿ ಕಡ್ಡಾಯ ಮತ್ತು 50 ವಯೋಮಿತಿ ಮೀರಿದ ಶಿಕ್ಷಕರು ಮತ್ತು ಸಿಬ್ಬಂದಿ ಫೇಸ್‌ಶೀಲ್ಡ್ ಧರಿಸಬೇಕು. ಕೋವಿಡ್-19 ಸಂಬಂಧಿಸಿದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮುಖ್ಯ ಗುರುಗಳು, ಸಿಆರ್‌ಪಿ, ಬಿಆರ್‌ಪಿ, ಬಿಆರ್‌ಸಿ ಹಾಗೂ ಬಿಇಒ ಅವರಿಗೆ ಸೂಚಿಸಲಾಗಿದೆ. ‘
ಕೋವಿಡ್-19ಗೆ ಸಂಬಂಧಿಸಿದಂತೆ ಇತರೆ ಇಲಾಖೆಗಳಿಗೂ ಸರ್ಕಾರದಿಂದ ಹಾಗೂ ಬಳ್ಳಾರಿ ಜಿಪಂ ವತಿಯಿಂದಲೂ ಸಹ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಇನ್ನು ಕೋವಿಡ್ ನಿಯಮ ಪಾಲನೆ ಕಡ್ಡಾಯ. ಜೊತೆಗೆ ಪೋಷಕರ ಅನುಮತಿ ಪತ್ರ ಕೂಡ ಕಡ್ಡಾಯಗೊಳಿಸಲಾಗಿದೆ.
*ಮಧ್ಯಾಹ್ನ ಬಿಸಿ ಊಟವಿಲ್ಲ:
ಮಧ್ಯಾಹ್ನದ ಉಪಹಾರ ಯೋಜನೆಯಡಿ ಬಿಸಿಊಟ ಇರುವುದಿಲ್ಲ ಹಾಗೂ ಆವರಣದಲ್ಲಿ ಊಟ ಮಾಡಲು ಸಹ ಅವಕಾಶವಿರುವುದಿಲ್ಲ ಎಂದು ಡಿಡಿಪಿಐ ಅವರು ಸ್ಪಷ್ಟಪಡಿಸಿದ್ದಾರೆ.
ಶಾಲೆಗೆ ಹಾಜರಾಗುವ ಎಲ್ಲಾ ಮಕ್ಕಳನ್ನು ಪ್ರತಿ ದಿನ ಕಡ್ಡಾಯವಾಗಿ ಥರ್ಮಲ್ ಸ್ಕಾನರ್ ಮೂಲಕ ಪರೀಕ್ಷಿಸುವುದು. ರೋಗ ಲಕ್ಷಣ ಕಂಡುಬಂದರೆ ಶಾಲೆಗೆ ಹಾಜರಾಗುವಂತಿಲ್ಲ. ಒಂದು ವೇಳೆ ಯಾವುದೇ ರೀತಿಯ ರೋಗಲಕ್ಷಣಗಳು ಇದ್ದಲ್ಲಿ ಪೋಷಕರ ಗಮನಕ್ಕೂ ಹಾಗೂ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತರುವುದು ಕಡ್ಡಾಯ ಎಂದು ಅವರು ವಿವರಿಸಿದ್ದಾರೆ.
ಒಂದು ತಂಡದಲ್ಲಿ ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ 15-20 ಇರಬೇಕು. ಗ್ರಾಮ ಪಂಚಾಯತ್‌ಗಳು/ನಗರ ಸ್ಥಳೀಯ ಸಂಸ್ಥೆಗಳು ಅವರ ವತಿಯಿಂದ ಶಾಲೆಗಳ ಸ್ವಚ್ಛತೆ ಹಾಗೂ ಸ್ಯಾನಿಟೈಸೇಷನ್ ವ್ಯವಸ್ಥೆ ಮಾಡಲು ಕ್ರಮವಹಿಸಬೇಕು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೊರಡಿಸಿರುವ ಕೋವಿಡ್-19ರ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ವಸತಿ ಶಾಲೆ ಮತ್ತು ವಸತಿ ನಿಲಯಗಳ ಮಕ್ಕಳು, ಶಿಕ್ಷಕರು ಮತ್ತು ಸಿಬ್ಬಂದಿ ಪ್ರವೇಶ ಪಡೆಯುವ ಮುಂಚಿನ 72 ಗಂಟೆಗಳ ಅಂತರದಲ್ಲಿ ಕೋವಿಡ್-19 ಪರೀಕ್ಷೆ ಮಾಡಿಸಿದ ನೆಗೆಟಿವ್ ವರದಿಯನ್ನು ಸಲ್ಲಿಸಬೇಕು.
ಈ ಸುದ್ದಿಯನ್ನೂ ಓದಿ: ಚಿಕ್ಕಮಗಳೂರಲ್ಲಿ ದತ್ತ ಜಯಂತಿ ಸಂಭ್ರಮ : ನಗರವೆಲ್ಲ ಕೇಸರಿ ಮಯ
ಶಾಲಾ ಪ್ರಾರಂಭದ ಕುರಿತು ಎಸ್‌ಡಿಎಂಸಿ/ ಆಡಳಿತ ಮಂಡಳಿಗಳು, ಪೋಷಕರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಕೈಗೊಂಡ ಪೂರ್ವ ತಯಾರಿಯನ್ನು ಮನವರಿಕೆ ಮಾಡಿಕೊಡಬೇಕು. ವಿದ್ಯಾರ್ಥಿಗಳು ಕುದಿಸಿ ಆರಿಸಿದ ಶುದ್ಧ ಕುಡಿಯುವ ನೀರನ್ನು ಮನೆಯಿಂದಲೇ ತರಬೇಕು ಎಂದು ಅವರು ವಿವರಿಸಿದ್ದಾರೆ.
ಸೋಂಕು ತಗಲದಂತೆ ಮುನ್ನೆಚ್ಚರಿಕಾ ಕ್ರಮಗಳಾಗಿ ಶಾಲಾ ಕಟ್ಟಡ ಸೇರಿದಂತೆ ಎಲ್ಲಾ ವಸ್ತುಗಳಿಗೆ 1% ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸುವುದು ಕಡ್ಡಾಯ. ಸೇವಾ ಸಂಸ್ಥೆಗಳಾದ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ದಾನಿಗಳ ನೆರವನ್ನು ಪಡೆದು ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಲಭ್ಯತೆಯನ್ನು ಒದಗಿಸುವುದು. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.
ಹೆಚ್ಚುವರಿ ಕೊಠಡಿ ಮೀಸಲಿಡಬೇಕು ಎಂದು ಸೂಚಿಸಿರುವ ಅವರು ಎಲ್ಲಾ ಶಾಲೆಗಳ ಶೌಚಾಲಯ, ಕೊಠಡಿಗಳು, ಮೈದಾನ, ಶಾಲಾ ಆವರಣವು ಸ್ವಚ್ಛ ಮಾಡಿಸುವುದು. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಶಾಲಾ ಅಂಗಳದಲ್ಲಿ ರಂಗೋಲಿ ಬಿಡಿಸಿ ಶಾಲಾ ಆವರಣವನ್ನು ಅಂದಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.